ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತೋವಿವಿಯ ಉದ್ಯಾನಗಿರಿಯಲ್ಲಿ ಸೋಮವಾರ ನಡೆದ 2ನೇ ದಿದನ ತೋಟಗಾರಿಕೆ ಮೇಳದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಯುವಪೀಳಿಗೆ ಕೃಷಿಕಡೆ ವಿಮುಖವಾಗುತ್ತಿದ್ದಾರೆ. ಸರಕಾರಿ ಕೆಲಸ ಸಿಕ್ಕರೆ ಸಾಕು ಎಂಬ ಭಾವನೆಗೆ ಬಂದುಬಿಟ್ಟಿದ್ದಾರೆ. ಕೃಷಿಕನಾದರೆ ಕನ್ಯೆ ಕೂಡ ಕೊಡಲು ಮುಂದೆ ಬರುತ್ತಿಲ್ಲ. ಸರಕಾರಿ ಇಲಾಖೆಯಲ್ಲಿ ಜವಾನನಾದರೂ ಕನ್ಯೆ ನೀಡುತ್ತಾರೆ. ಓರ್ವ ಸರ್ಕಾರಿ ಅಧಿಕಾರಿ ಒಂದು ತಿಂಗಳಿಗೆ ಪಡೆಯುವ ಸಂಬಳದಷ್ಟು ರೈತ ಒಂದು ಎಕರೆಯಲ್ಲಿ ಆದಾಯ ಸಂಪಾದಿಸುತ್ತಾನೆ ಎಂದು ಹೇಳಿದರು.
ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಾಕಷ್ಟು ತಂತ್ರಜ್ಞಾನಗಳು ಬಂದಿದೆ. ವಿಶ್ವವಿದ್ಯಾಲಯ ಅನೇಕ ಸಂಶೋಧನೆ ಮಾಡಿ, ಹೊಸ ಹೊಸ ತಳಿಗಳನ್ನು ಹೊರತಂದಿದ್ದಾರೆ. ಐಸಿಆರ್‌ನಲ್ಲಿ ತೋವಿವಿ ಎ ಗ್ರೇಡ್ ಪಡೆದುಕೊಂಡಿದೆ. ದೇಶ-ವಿದೇಶಗಳಲ್ಲಿ ಬಾಗಲಕೋಟೆ ತೋವಿವಿ ಹೆಸರು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ವಿಶ್ವವಿದ್ಯಾಲಯ ಹೊರತಂದ ತಳಿಗಳ ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದರ ಸದುಪಯೋಗ ರೈತರು ಪಡೆದದುಕೊಳ್ಳಬೇಕು ಎಂದರು.ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಾ.ಪರಶಿವಮೂರ್ತಿಮಾತನಾಡಿ, ಆಹಾರ ಉತ್ಪಾದನೆಯಲ್ಲಿ ಭಾರತ ತನ್ನ ಕಾಲ ಮೇಲೆ ನಿಂತಿದೆ. ಬೇರೆ ದೇಶಕ್ಕೆ ಇಲ್ಲಿಯ ಗೋದಿ ರಫ್ತಿಗೆ ಬೇಡಿಕೆ ಇದೆ. ರೈತರಿಗೆ ಮುಖ್ಯವಾಗಿ ಮಾರಾಟದ ಸಮಸ್ಯೆ ಇದ್ದು, ರೈತ ಉತ್ಪಾದಕ ಸಂಘಗಳು ಕೆಲವೇ ಕೆಲವು ಚೆನ್ನಾಗಿ ಕೆಲಸ ಮಾಡುತ್ತಿವೆ. ಇವುಗಳು ಬಲಿಷ್ಠವಾದಲ್ಲಿ ರೈತರು ಬೆಳೆದ ಬೆಳೆಯನ್ನು ಮಧ್ಯವರ್ತಿಗಳಿಲ್ಲದೇ ನೇರ ಮಾರುಕಟ್ಟೆ ದೊರೆಯುತ್ತದೆ ಎಂದರು.
ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ ಮಾತನಾಡಿ, ಕೃಷಿ ಚೆನ್ನಾಗಿದ್ದಲ್ಲಿ ಮಾತ್ರ ನಾವು ಚೆನ್ನಾಗಿ ಇರಲು ಸಾಧ್ಯ ಎಂದರು.ಧಾರವಾಡ ಕೃಷಿ ವಿಶ್ವ ವಿದ್ಯಾಲಯ ನಿವೃತ್ತ ಕುಪಲತಿ ಡಾ.ವಿ.ಐ.ಬೆಣಗಿ ಮಾತನಾಡಿ, ವಿಷಮುಕ್ತ ಆಹಾರ ಸೇವನೆಯಿಂದ ಚೈತನ್ಯ ಶಕ್ತಿ ಶೇ.50ರಷ್ಟು ಕಡಿಮೆ ಆಗಿದೆ. ವಿಪರೀತ ರಾಸಾಯನಿಕಗಳ ಬಳಕೆಯಿಂದ ಬೆಳೆದ ಆಹಾರ ಸೇವಿಸಿ ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ರಾಸಾಯನಿಯ ಬಳಕೆಯಿಂದ ಮಣ್ಣಿನ ಫಲವತ್ತತೆ ಕೂಡ ಹಾಳಾಗುತ್ತಿದ್ದು, ಮಣ್ಣಿನ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗಮನ ಹರಿಸಬೇಕಿದೆ ಎಂದರು.ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ ಮಾತನಾಡಿದರು.ತೋವಿವಿ ಹೊರತಂದ ವಿವಿಧ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು. ಹುನಗುಂದ ಶಾಸಕ ಹಾಗೂ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ತೋಟಗಾರಿಕೆ ವಿವಿಯ ಕುಲಪತಿ ಡಾ.ವಿಷ್ಣುವರ್ಧನ, ಎಸ್ಪಿ ಸಿದ್ದಾರ್ಥ ಗೋಯಲ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾಧಿಕಾರಿ ಡಾ.ರವೀಂದ್ರ ಬೆಳ್ಳಿ, ಅಪೇಡಾ ವ್ಯವಸ್ಥಾಪಕಿ ಮಧುಮತಿ ಆಂಡ್ರಾಸ್, ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶ ಟಿ.ಎಸ್ ಸೇರಿ ತೋವಿವಿಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
8 ಜನ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ:ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತ, ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೈಸೂರು ಜಿಲ್ಲೆಯ ಜಗದೀಶ ಪಿ, ಚಾಮರಾಜ ನಗರ ಜಿಲ್ಲೆಯ ಸಿದ್ದೇಗೌಡ ಎನ್, ಮಂಡ್ಯ ಜಿಲ್ಲೆಯ ಎಚ್.ಎನ್. ಸತ್ಯನಾರಾಯಣ, ಹಾಸನ ಜಿಲ್ಲೆಯ ಲಕ್ಷ್ಮೀ ಟಿ.ಎಂ, ಧಾರವಾಡ ಜಿಲ್ಲೆಯ ಕಲಾವತಿ ಮಾರುತಿ ಚವನಗೌಡರ, ಗದಗ ಜಿಲ್ಲೆಯ ಭೀಮರಾವ ತಾನಾಜೀರಾವ್ ಶಿಂಧೆ, ಹಾವೇರಿಯ ನಾಗರಾಜ ಶಿವಾನಂದ ಹುಲಗೂರ ಹಾಗೂ ಬೆಳಗಾವಿ ಜಿಲ್ಲೆಯ ಬಾಳಪ್ಪ ಬಸಪ್ಪ ಬೆಳಕೂಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.