ಸಂಶೋಧನೆಗೆ ಒತ್ತು ನೀಡಿ, ನಿರಂತರವಾಗಿರಲಿ

KannadaprabhaNewsNetwork | Published : Oct 6, 2024 1:22 AM

ಸಾರಾಂಶ

ಕೊರೋನಾ ಸಮಯದಲ್ಲಿ ಭಾರತದ ವ್ಯಾಕ್ಸೀನ್ ಜಗತ್ತಿಗೆ ಜೀವರಕ್ಷಕವಾಗಿದ್ದು, ಭಾರತದ ಹೆಮ್ಮೆಯಾಗಿದೆ. ಔಷಧ ತಂತ್ರಜ್ಞಾನದಲ್ಲಿ ಅವಕಾಶಗಳಿದ್ದು, ಸಂಶೋಧನೆಗೆ ಒತ್ತು ನೀಡಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಲಹೆಗಾರ ಡಾ.ಉಮೇಶದತ್ತ ಗುಪ್ತಾ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೊರೋನಾ ಸಮಯದಲ್ಲಿ ಭಾರತದ ವ್ಯಾಕ್ಸೀನ್ ಜಗತ್ತಿಗೆ ಜೀವರಕ್ಷಕವಾಗಿದ್ದು, ಭಾರತದ ಹೆಮ್ಮೆಯಾಗಿದೆ. ಔಷಧ ತಂತ್ರಜ್ಞಾನದಲ್ಲಿ ಅವಕಾಶಗಳಿದ್ದು, ಸಂಶೋಧನೆಗೆ ಒತ್ತು ನೀಡಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಲಹೆಗಾರ ಡಾ.ಉಮೇಶದತ್ತ ಗುಪ್ತಾ ಹೇಳಿದರು.

ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಭವನದಲ್ಲಿ ಆಯೋಜಿಸಿದ್ದ ಹಾನಗಲ್ಲ ಕುಮಾರೇಶ್ವರ ಔಷಧ ವಿಜ್ಞಾನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಔಷಧ ತಂತ್ರಜ್ಷಾನ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿಗೆ, ಪದವಿ ನಂತರವೂ ಸಂಶೋಧನೆಗಳು ನಿರಂತರವಾಗಿರಲಿ, ಮುಂದಿನ ಪಿಳಿಗೆ ಆರೋಗ್ಯದ ರಕ್ಷಣೆ ನಮ್ಮ ಮೇಲೆ ಮೇಲಿದೆ ಎಂದರು.ಅತಿಥಿ ಪುಣೆಯ ಬಿ.ವಿ.ಜಿ ಲೈಫ್‌ಸೈನ್ಸ್ ಲಿಮಿಟೆಡ್‌ನ ನಿರ್ದೇಶಕ ಡಾ.ಪವನಕುಮಾರ ಸಿಂಗ್ ಮಾತನಾಡಿ, ಇಂದು ಔಷಧಿ ಕಂಪನಿಗಳನ್ನು ಸ್ಥಾಪಿಸಲು ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಇವೆ. ನಮಗೆ ನಮ್ಮ ಕ್ಷೇತ್ರದ ಸಂಪೂರ್ಣ ಜ್ಞಾನ ಮುಖ್ಯ ಎಂದರು.ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವಿಧರರಾಗಲು ವಿದ್ಯಾರ್ಥಿಗಳಲ್ಲಿ ಸಮರ್ಪಣೆ, ಪರಿಶ್ರಮ ಮತ್ತು ಬದ್ಧತೆ ಅಗತ್ಯವಿದೆ. ಬಿ.ವಿ.ವಿ ಸಂಘದಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಗತ್ಯವಾದ ಪರಿಸರವನ್ನು ನಿರ್ಮಾಣ ಮಾಡಲಾಗಿದೆ. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ಆಶಯದಂತೆ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೋಧನೆಯ ಜೊತೆಗೆ ಸಂಶೋಧನೆಗೂ ಆದ್ಯತೆ ನೀಡಲಾಗಿದ್ದು, ₹3 ಕೋಟಿ ವೆಚ್ಚದಲ್ಲಿ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಔಷಧ ವಿಜ್ಞಾನದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಭವಿಷ್ಯವಿದೆ ಎಂದು ತಿಳಿಸಿದರು.ಹಾನಗಲ್ಲ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಬಿ.ವಿ.ವಿ.ಎಸ್ ರೀಸರ್ಚ್‌ ಸೆಂಟರ್ ಮತ್ತು ಬಿ.ವಿ.ಜಿ ಲೈಫ್‌ಸೈನ್ಸ್ ಲಿಮಿಟೆಡ್ ಪುಣೆ ಜಂಟಿಯಾಗಿ ತಂತ್ರಜ್ಞಾನ ವರ್ಗಾವಣೆ ಹಾಗೂ ಜಂಟಿಪೆಟೆಂಟ್ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಪದವಿಧರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಸಮಾರಂಭದಲ್ಲಿ 150 ಪದವಿಧರರಿಗೆ ಪದವಿ ಪ್ರದಾನ ಮಾಡಲಾಯಿತು. ಕುಮಾರಿ ಸೌಂದರ್ಯ ಮನಗೂಳಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಶ್ರೀನಿವಾಸ ಸ್ವಾಗತಿಸಿದರು. ಡಾ.ಚಂದ್ರಶೇಖರ ವಿ.ಎಂ.ಮಹಾವಿದ್ಯಾಲಯದ ಹಾಗೂ ಬಿ.ವಿ.ವಿ ಸಂಘದ ಬೆಳವಣಿಗೆ ಮತ್ತು ಸಾಧನೆಗಳನ್ನು ವಿವರಿಸಿದರು. ಡಾ.ಬಿ.ಎಸ್.ಕಿತ್ತೂರ ಅತಿಥಿಗಳನ್ನು ಪರಿಚಯಿಸಿದರು. ಡಾ.ಎಸ್.ಆರ್.ದೇಶಪಾಂಡೆ ಪದವಿಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪೂರ್ಣಿಮಾ ಹೊಸಮಠ ವಂದಿಸಿದರು. ಡಾ.ಸೌಮ್ಯಾ ಮೊರಬದ ಮತ್ತು ಕು.ಸುಷ್ಮಿತಾ ಮೂಡಲಗಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಬಿ.ವಿ.ವಿ ಸಂಘದ ಗೌರವಾನ್ವಿತ ಸದಸ್ಯರು, ವಿವಿಧ ಕ್ಷೇತ್ರಗಳ ಆಹ್ವಾನಿತ ಗಣ್ಯರು, ಅಂಗಸಂಸ್ಥೆಗಳ ಮುಖ್ಯಸ್ಥರು, ಮಾಧ್ಯಮ ಮಿತ್ರರು, ಮಹಾವಿದ್ಯಾಲಯದ ಬೋಧಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.

Share this article