ಕನ್ನಡಪ್ರಭ ವಾರ್ತೆ ತಿಪಟೂರು
ಗ್ರಾಮೀಣ ಭಾಗದ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರುಗಳನ್ನು ಉದ್ದಿಮೆದಾರರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ನಿಟ್ಟಿನಲ್ಲಿ ಉದ್ಯೋಗ ಶೀಲ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ಎಂ. ಸುದರ್ಶನ್ ತಿಳಿಸಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ಸಂಸ್ಥೆ, ಕೌಶಲ್ಯ ಅಭಿವೃದ್ಧಿ ಉಧಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಧಾರವಾಡ ಇವರ ಸಹಯೋಗದೊಂದಿಗೆ ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ ಹಮ್ಮಿಕೊಂಡಿದ್ದ ವಸತಿ ರಹಿತ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಸಮಾಜದ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವುದಲ್ಲದೆ ಉತ್ತಮ ಉದ್ದಿಮೆದಾರಳಾಗುವಲ್ಲಿಯೂ ಕೂಡ ಯಶಸ್ಸನ್ನು ಸಾಧಿಸಬೇಕು. ಅದರಲ್ಲೂ ಗ್ರಾಮೀಣ ಪ್ರದೇಶದ ಸ್ವಸಹಾಯ ಗುಂಪಿನ ಸದಸ್ಯರುಗಳು ಕೇವಲ ಹಣದ ಉಳಿತಾಯ ಅಷ್ಟೇ ಅಲ್ಲದೆ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಂಡು ಉತ್ತಮ ಉದ್ದಿಮೆದಾರಳು ಆಗಬೇಕೆಂಬ ನಿಟ್ಟಿನಲ್ಲಿ ಎನ್.ಆರ್.ಎಲ್.ಎಂ ಯೋಜನೆಯು ಕೈಗೊಂಡಿರುವ ಕ್ರಮ ಶ್ಲಾಘನೀಯ ಎಂದರು. ಸೇಡಾಕ್ ಸಂಸ್ಥೆ ಜಂಟಿ ನಿರ್ದೇಶಕ ಎಂ.ಎಸ್ ಮಧು ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಮಹಿಳಾ ಸದಸ್ಯರುಗಳಿಗೆ ತರಬೇತಿಗಳನ್ನು ನೀಡುತ್ತಾ ಅವರಲ್ಲಿ ಉದ್ಯಮಶೀಲತಾ ಮನೋಭಾವವನ್ನು ಬೆಳೆಸುವಲ್ಲಿ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿದೆ ಎಂದರು. ಎನ್‌ಆರ್‌ಎಲ್‌ಎಂ ಯೋಜನೆಯ ವಿಷಯ ನಿರ್ವಾಹಕ ಹರೀಶ್ ಮಾತನಾಡಿ ಗ್ರಾಮೀಣ ಭಾಗದ ಸ್ವ ಸಹಾಯ ಗುಂಪಿಗೆ ಸಂಜೀವಿನಿ ಯೋಜನೆಯು ಒಂದು ವರದಾನವಾಗಿದ್ದು ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕೆಂದರು ತರಬೇತಿ ಕಾರ್ಯಕ್ರಮದಲ್ಲಿ ಮಾರುಕಟ್ಟೆ ಸಮೀಕ್ಷೆ, ಸಣ್ಣ ಉದ್ಯಮ ನಿರ್ವಹಣೆ, ಮಾರುಕಟ್ಟೆ ತಂತ್ರಗಳು, ಗ್ರಾಹಕರ ಮನೋಭಾವನೆ, ಅರಿಯುವಿಕೆ, ಗ್ರಾಹಕರ ಸಂತೃಪ್ತಿ, ಯಶಸ್ವಿ ಉದ್ಯಮಶೀಲರ ಅನುಭವ ಹಂಚಿಕೆ, ಉದ್ಯಮ ಸ್ಥಾಪನೆಯ ಕಾನೂನು ಹಾಗೂ ಕಾಯಿದೆಗಳ ತಿಳುವಳಿಕೆ, ಜಿ.ಎಸ್.ಟಿ, ಆದಾಯ ತೆರಿಗೆ ಲೆಕ್ಕ ಪತ್ರಗಳ ನಿರ್ವಹಣೆ, ಯೋಜನಾ ವರದಿ ತಯಾರಿಕಾ ವಿಧಾನಗಳ ಬಗ್ಗೆ ತರಬೇತಿ ಮಹಿಳೆಯರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ತರಬೇತುದಾರರಾದ ಚೈತ್ರಾ, ಆನಂದ್ ಭಾರದ್ವಾಜ್, ಎನ್.ಎಸ್.ಆರ್.ಸಿ.ಈ ಎಲ್-ಐಐಎಂ ಬೆಂಗಳೂರು ಮತ್ತು ಎನ್‌ಆರ್‌ಎಲ್‌ಎಂ ಸಿಬ್ಬಂದಿ ಚಂದ್ರಕಲಾ, ಕೋಕಿಲ, ಮೈತ್ರ ಸೇರಿದಂತೆ ತಾಲೂಕಿನ 26 ಗ್ರಾಮ ಪಂಚಾಯಿತಿಗಳಿಂದ ಮಹಿಳಾ ಉದ್ದಿಮೆದಾರರು ಭಾಗವಹಿಸಿದ್ದರು.