ಹೊಸದುರ್ಗ: ಕೈಲಾಗದ ಪೌರಕಾರ್ಮಿಕರ ಬದಲಾಗಿ ಅನಧಿಕೃತವಾಗಿ ಬೇರೆಯವರನ್ನು ಕೆಲಸಕ್ಕೆ ತೆಗೆದಕೊಂಡಿದ್ದು, ಅವರಿಗೆ ಕೆಲಸದ ವೇಳೆ ಅವಘಡ ಸಂಭವಿಸಿದರೆ ಯಾರು ಹೊಣೆ ? ಯಾವ ಆಧಾರದ ಮೇಲೆ ಅವರನ್ನು ಕೆಲಸಕ್ಕೆ ತೆಗದುಕೊಂಡಿದ್ದೀರಾ ? ಎಂದು ಸದಸ್ಯ ದಾಳಿಂಬೆ ಗಿರೀಶ್ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಸೋಮವಾರ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ಸಿಬ್ಬಂದಿಗಳು ಸದಸ್ಯರುಗಳಿಗೆ ಸ್ಪಂದಿಸುತ್ತಿಲ್ಲ. ಸ್ವಚ್ಛತೆ ಮಾಡಲು ಪೌರ ಕಾರ್ಮಿಕರು ಸಿದ್ಧರಿದ್ದಾರೆ. ಅವರಿಂದ ಕೆಲಸ ಪಡೆದುಕೊಳ್ಳಲು ಸಿಬ್ಬಂದಿಯೇ ಸಿದ್ಧರಿಲ್ಲ. ಕೇವಲ ಕಚೇರಿಯಲ್ಲಿ ಕುಳಿತು ಸಹಿ ಹಾಕುವುದೇ ಸಿಬ್ಬಂದಿಯ ಕೆಲಸವಲ್ಲ. ಮೊದಲು ಸದಸ್ಯರಿಗೆ ಗೌರವ ಕೊಡುವುದನ್ನು ಕಲಿಸಿ ಹಾಗೆಯೇ ಬದಲಿಯಾಗಿ ಪಡೆದ ನೌಕರರಿಗೆ ಏನಾದರು ತೊಂದರೆಯಾದರೆ ಸಂಬಂಧಿಸಿದ ಇಲಾಖೆಯ ಸಿಬ್ಬಂದಿಯೇ ನೇರ ಹೊಣೆಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಸದಸ್ಯ ಸಂತೋಷ್ ಕುಮಾರ್ ಮಾತನಾಡಿ, 2010ನೇ ಸಾಲಿನಲ್ಲಿ ಪಟ್ಟಣದ ಆಶ್ರಯ ಯೋಜನೆಯಡಿ ಶಾಂತಿನಗರ ಬಡಾವಣೆಯ ರಸ್ತೆ ಬದಿ ಸಾರ್ವಜನಿಕ ನಿವೇಶನಗಳನ್ನು ಮೀಸಲಿಡಲಾಗಿತ್ತು. ಆ ನಿವೇಶನಗಳನ್ನು ಹರಾಜು ಪ್ರಕ್ರಿಯೆ ಮೂಲಕ ಪಡೆದಿರುವ ರೀತಿಯಲ್ಲಿ ದಾಖಲೆ ಸೃಷ್ಟಿಸಿ ಖಾತೆಗಳನ್ನು ಮಾಡಿಕೊಡಲಾಗಿದೆ. ಈ ಸಂಬಂಧ ಅಕ್ರಮ ಖಾತೆಗಳನ್ನು ರದ್ದುಗೊಳಿಸಿ ನಿವೇಶನಗಳನ್ನು ಪುರಸಭೆ ವ್ಯಾಪ್ತಿಗೆ ಪಡೆಯಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದ್ಯಾವುದನ್ನು ಪರಿಗಣಿಸಿದೇ ಖಾತೆ ಹಾಗೂ ಇ-ಸ್ವತ್ತು ನೀಡಿರುವ ಕ್ರಮ ಸರಿಯಲ್ಲ. ಈ ಕೂಡಲೇ ಅಕ್ರಮವಾಗಿ ನೀಡಿರುವ ನಿವೇಶನಗಳ ಖಾತೆಯನ್ನು ರದ್ದುಗೊಳಿಸಿ, ಪುರಸಭೆ ವ್ಯಾಪ್ತಿಗೆ ನಿವೇಶನ ಪಡೆಯಬೇಕು ಎಂದು ಮುಖ್ಯಾಧಿಕಾರಿ ತಿಮ್ಮರಾಜು ಅವರಿಗೆ ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ತಿಮ್ಮರಾಜು ಅವುಗಳನ್ನು ನಾನು ಹೊಸದಾಗಿ ಖಾತೆ ಮಾಡಿಲ್ಲ. ಈ ಹಿಂದೆಯೇ ಮಾಡಲಾಗಿತ್ತು ಅವುಗಳಿಗೆ ಇ-ಸ್ವತ್ತು ನೀಡಲಾಗಿದೆ. ಅವು ಅಧಿಕೃತವೇ , ಅನಧೀಕೃತವೇ ಎಂಬುದನ್ನು ಪರಿಶೀಲಿಸುತ್ತೆನೆ ಎಂದರು .
ಇದಕ್ಕೆ ತೃಪ್ತರಾಗದ ಸದಸ್ಯರು ಈಗ ದಾಖಲೆ ನೋಡುವುದಾದರೆ ಇ-ಸ್ವತ್ತು ನೀಡುವಾಗ ಏನು ನೋಡಿದಿರಿ, ಹಾಗಾದರೆ ಪಟ್ಟಣದ ಎಲ್ಲಾ ನಿವೇಶನಗಳಿಗೂ ಇ ಸ್ವತ್ತು ನೀಡಿ ಇಲ್ಲ ಇವುಗಳನ್ನು ರದ್ದು ಪಡಿಸಿ ಎಂದು ಒತ್ತಾಯಿಸಿದರು.ಪುರಸಭೆ ಸದಸ್ಯ ರಾಮಚಂದ್ರಪ್ಪ ಮಾತನಾಡಿ, ಪುರಸಭೆ ಅಧಿಕಾರಿಗಳು ಇ-ಸ್ವತ್ತು ನೀಡುವಿಕೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಅರ್ಜಿ ಹಾಕಿ ಐದಾರು ತಿಂಗಳಾದರೂ ಇ-ಸ್ವತ್ತು ಸಿಗದೇ ಜನರು ಪರದಾಡುವಂತಾಗಿದೆ. ನೇರವಾಗಿ ಬಡವರಿಗೆ ಇ-ಸ್ವತ್ತು ಸಿಗುವ ವ್ಯವಸ್ಥೆ ಆಗಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಪಟ್ಟಣದ ಎಲ್ಲಾ ನಾಗರಿಕರಿಗೂ ಇ -ಸ್ವತ್ತು ನೀಡುವ ವ್ಯವಸ್ಥೆ ಆಗಬೇಕು ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯ ಶ್ರೀನಿವಾಸ್ ಮಾತನಾಡಿ, ಜುಲೈ ತಿಂಗಳಲ್ಲಿ ಪುರಸಭೆ ಸದಸ್ಯರಿಗೆ ಮಾಹಿತಿ ನೀಡದೇ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಸದಸ್ಯರ ಗಮನಕ್ಕೆ ಬಾರದೇ ನಿಮಗೆ ಸಭೆ ನಡೆಸುವ ಅಧಿಕಾರ ಕೊಟ್ಟವರು ಯಾರು ? ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ವಿಚಾರ ನ್ಯಾಯಾಲಯದ ಅಂಗಳದಲ್ಲಿ ಇದ್ದ ಕಾರಣ ಸರಕಾರದ ಮಾರ್ಗಸೂಚಿಯಂತೆ ಪುರಸಭೆ ಸದಸ್ಯರ ಪರವಾಗಿ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ನಿಮ್ಮನ್ನು ಹೊರಗಿಟ್ಟು ಸಭೆ ನಡೆಸುವ ಉದ್ದೇಶ ಇರಲಿಲ್ಲ ಎಂದು ಮುಖ್ಯಾಧಿಕಾರಿ ತಿಮ್ಮರಾಜು ಸಮಜಾಯಿಷಿ ನೀಡಿದರು.ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಹಾಗೂ ಪುರಸಭೆ ಸದಸ್ಯರುಗಳು, ನಾಮ ನಿರ್ದೇಶಿತ ಸದಸ್ಯರುಗಳು ಹಾಜರಿದ್ದರು.