ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ತಾಲೂಕಿನ ವಂದಾರಗುಪ್ಪೆ ಬಳಿಯ ಸಸ್ಯಧಾಮದಲ್ಲಿ ಕರ್ನಾಟಕ ರಾಜ್ಯ ಎಸ್ಸಿ ಮತ್ತು ಎಸ್ಟಿ ನೌಕರರ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಆರನೇ ಐಕ್ಯತಾ ಸಮಾವೇಶದ ಕೃತಜ್ಞತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೋಷಿತ ಸಮುದಾಯಗಳ ನೌಕರರು ಮತ್ತು ದಲಿತ ಸಂಘಟನೆಗಳ ಸಂಘಟನೆಗಳು ಸಮುದಾಯದ ಹಿತಕಾಯುವಲ್ಲಿ ವಿಫಲರಾಗಿದ್ದು ನೌಕರರು ಸೇರಿದಂತೆ ಎಲ್ಲಾ ರೀತಿಯ ಜನರ ಮೇಲೆ ಒಂದಲ್ಲ ಒಂದು ರೀತಿಯ ಶೋಷಣೆ ನಡೆಯುತ್ತಲೇ ಇದೆ. ಶೋಷಿತ ಸಮುದಾಯದಲ್ಲಿ ಜಾಗೃತಿ ಮತ್ತು ಒಗ್ಗಟ್ಟು ಮೂಡಿಸಲು ಸಮಾವೇಶಗಳು ಅಗತ್ಯವಾಗಿದ್ದು ಆ ಕೆಲಸವನ್ನು ಸಮಿತಿ ಯಶಸ್ವಿಯಾಗಿ ಮಾಡಿದೆ. ಇಂತಹ ಜಾಗೃತಿ ಸಮಾವೇಶಗಳು ಆಗಿಂದಾಗ್ಗೆ ನಡೆಯಲಿ. ಸಂಘಟಿತರಾಗಿ ತಮ್ಮ ಹಕ್ಕು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಮಾಜದಲ್ಲಿ ನೊಂದವರ ಧ್ವನಿಯಾಗಿ ಕೆಲಸ ಮಾಡಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಎಸ್ಸಿ ಮತ್ತು ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷರಾದ ಶಿವಶಂಕರ್ ಮಾತನಾಡಿ, ಸಂವಿಧಾನ ಜಾರಿಗೆ ಬಂದು ೭೫ ವರ್ಷಗಳಾದರೂ ಶೋಷಿತ ಸಮುದಾಯಗಳ ಮೇಲೆ ಇಂದಿಗೂ ದೌರ್ಜನ್ಯ ಶೋಷಣೆ ತಪ್ಪಿಲ್ಲ. ಇದನ್ನು ಎದುರಿಸಬೇಕೆಂದರೆ ಸಮುದಾಯ ಜಾಗೃತಿ ಜೊತೆಗೆ ಸಂಘಟಿತರಾಗಬೇಕು. ನೀಲಿ ಶಾಲನ್ನು ಹೆಗಲ ಮೇಲೆ ಹಾಕಿಕೊಂಡರೆ ಸಾಲದು. ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ಅವರು ಕೊಟ್ಟಿರುವ ಸಂವಿಧಾನದ ಮೂಲಕ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ ಎಂದು ಎಚ್ಚರಿಸಿದ ಅವರು, ೬ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶವನ್ನು ಯಶಸ್ವಿಗೊಳಿಸಿದ ನಮ್ಮ ಸಮಿತಿಯ ಎಲ್ಲಾ ಸದಸ್ಯರಿಗೆ, ದಲಿತ ಸಂಘಟನೆಗಳಿಗೆ ಕೃತಜತ್ಞೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್.ಜೈಪ್ರಕಾಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿಯ ರಾಜ್ಯ ಮತ್ತು ಜಿಲ್ಲೆ ಹಾಗೂ ತಾಲೂಕು ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ದಲಿತ ಸಂಘಟನೆಗಳ ಸಹಕಾರದಿಂದ ರಾಜ್ಯ ಮಟ್ಟದ ೬ನೇ ಐಕ್ಯತಾ ಸಮಾವೇಶ ಯಶಸ್ವಿಗೊಂಡಿದೆ. ಸಮಾವೇಶದ ಯಶಸ್ಸಿಗಾಗಿ ಎಲ್ಲಾ ಪದಾಧಿಕಾರಿಗಳು, ಸದಸ್ಯರಿಗೆ ಮತ್ತು ದಲಿತ ಸಂಘಟನೆಗಳ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದು ನಮ್ಮ ಕರ್ತವ್ಯ. ಮುಂದೆಯೂ ಇದೇ ರೀತಿಯ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹ ಇರಲಿ ಎಂದರು.
ಸಂಘದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಬಿ.ಉಮೇಶ್‌ಕುಮಾರ್ ಮತ್ತು ಪದಾಧಿಕಾರಿಗಳಾದ ನಂಜುಂಡಪ್ಪ, ಉಮೇಶ್, ರಮೇಶ್ ಮತ್ತು ತಾಲೂಕು ಸಮಿತಿಯ ಪದಾಧಕಾರಿಗಳು, ಸದಸ್ಯರು ಹಾಗೂ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.