ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಿಕಾಪುರ ಗ್ರಾಮದಲ್ಲಿ ಒಬಿಸಿ ಸಮುದಾಯಕ್ಕೆ ಸ್ವಂತ ರುದ್ರಭೂಮಿ ಇಲ್ಲದೆ, ಭಾನುವಾರ ಮೃತಪಟ್ಟಿದ್ದ ಪಚ್ಚಿಯಪ್ಪ ಅವರ ಅಂತ್ಯಸಂಸ್ಕಾರವನ್ನು ಅನಿವಾರ್ಯವಾಗಿ ಉಡುತೊರೆ ಹಳ್ಳದ ದಂಡೆಯಲ್ಲೇ ನೆರವೇರಿಸಲಾಯತು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಿಕಾಪುರ ಗ್ರಾಮದಲ್ಲಿ ಒಬಿಸಿ ಸಮುದಾಯಕ್ಕೆ ಸ್ವಂತ ರುದ್ರಭೂಮಿ ಇಲ್ಲದೆ, ಭಾನುವಾರ ಮೃತಪಟ್ಟಿದ್ದ ಪಚ್ಚಿಯಪ್ಪ ಅವರ ಅಂತ್ಯಸಂಸ್ಕಾರವನ್ನು ಅನಿವಾರ್ಯವಾಗಿ ಉಡುತೊರೆ ಹಳ್ಳದ ದಂಡೆಯಲ್ಲೇ ನೆರವೇರಿಸಲಾಯತು.

ಸರ್ಕಾರದಿಂದ ಸಾರ್ವಜನಿಕ ಬಳಕೆಗಾಗಿ ಮಂಜೂರಾಗಿದ್ದ 44 ಸೆಂಟ್ (19,144 ಚ.ಅ) ಸ್ಮಶಾನದ ಜಾಗವನ್ನು ಬೇರೆ ಸಮುದಾಯದವರು ಅತಿಕ್ರಮಿಸಿ ಬೋರ್ಡ್‌ಗಳನ್ನು ಹಾಕಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ಬೋರ್ಡ್‌ಗಳನ್ನು ತೆರವುಗೊಳಿಸಿ ನ್ಯಾಯ ಒದಗಿಸುವಂತೆ ತಾಲೂಕು ಆಡಳಿತ ಹಾಗೂ ಕಂದಾಯ ಇಲಾಖೆಗೆ ನಾಲ್ಕು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಪರಿಣಾಮವಾಗಿ ಕಳೆದ 70 ವರ್ಷಗಳಿಂದ ಅಂಬಿಕಾಪುರದಲ್ಲಿ ನೆಲೆಸಿರುವ ಓಬಿಸಿ ಸಮುದಾಯದವರು ಸ್ಮಶಾನವಿಲ್ಲದೆ ಶವಸಂಸ್ಕಾರಕ್ಕೂ ಪರದಾಡುವಂತಾಗಿದೆ. ಮಳೆಗಾಲದಲ್ಲಿ ಹಳ್ಳದ ದಂಡೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುವುದು ಮತ್ತಷ್ಟು ಕಷ್ಟಕರವಾಗಿ ಎಂದು ಕಿಡಿಕಾರಿದರು.

ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿರುವ ಸ್ಥಳೀಯ ಗ್ರಾಮಸ್ಥರು ಹಾಗೂ ರೈತ ಸಂಘಟನೆಯ ಮುಖಂಡರು ವ್ಯವಸ್ಧೆ ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘಟನೆ ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರ ಪ್ರಮುಖ ಬೇಡಿಕೆಗಳು:

1.ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು.

2.ಸ್ಮಶಾನದಲ್ಲಿ ಅಕ್ರಮವಾಗಿ ಹಾಕಲಾಗಿರುವ ಬೋರ್ಡ್‌ಗಳನ್ನು ತೆರವುಗೊಳಿಸಿ, ಮಂಜೂರಾದ 44 ಸೆಂಟ್ ಜಾಗವನ್ನು ಎಲ್ಲಾ ಸಮುದಾಯದವರಿಗೂ ಲಭ್ಯವಾಗುವಂತೆ ಮಾಡಬೇಕು.

3.ಹಳೆಯ ಜಾಗ ಸಿಗದಿದ್ದಲ್ಲಿ, ಓಬಿಸಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 1 ಎಕರೆ ಹೊಸ ಸರ್ಕಾರಿ ಜಮೀನನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಬೇಕು.

4.ಸ್ಮಶಾನಕ್ಕೆ ತಲುಪಲು ಸೂಕ್ತ ರಸ್ತೆ ನಿರ್ಮಿಸಿಕೊಡಬೇಕು.