ಕನ್ನಡಪ್ರಭವಾರ್ತೆ ತಿಪಟೂರು
ವಿದ್ಯುತ್ ಖಾಸಗೀಕರಣ ವಿರೋಧಿಸಿ ನಗರದ ಬೆಸ್ಕಾಂ ಕಚೇರಿ ಮುಂದೆ ಬೆಸ್ಕಾಂ ಅಧಿಕಾರಿಗಳು, ನೌಕರರು, ಗುತ್ತಿಗೆದಾರರ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಏರ್ಪಡಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಂದೊಂದೇ ಪಬ್ಲಿಕ್ ಸೆಕ್ಟರ್‌ಗಳನ್ನು ಖಾಸಗೀಕರಣಗೊಳಿಸುತ್ತಿದ್ದು ಇದನ್ನು ತಡೆಯದಿದ್ದರೆ ಮುಂದೆ ಬೆಸ್ಕಾಂ ನೌಕರರು, ರೈತರು, ಕಾರ್ಮಿಕರು ಎಲ್ಲರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಖಾಸಗೀಕರಣದ ವಿರುದ್ಧ ಹೋರಾಡುತ್ತಿರುವ ಬೆಸ್ಕಾಂ ನೌಕರರಿಗೆ ಪ್ರಾಂತ ರೈತಸಂಘ ಬೆಂಬಲಿಸುತ್ತಿದ್ದು, ಅದೇ ರೀತಿ ಸಂಘದ ಎಲ್ಲ ಹೋರಾಟಗಳಿಗೆ ಬೆಸ್ಕಾಂ ನೌಕರರು ಬೆಂಬಲಿಸಬೇಕು ಎಂದರು. ವಿದ್ಯುತ್ ಖಾಸಗೀಕರಣ ವಿರೋಧಿಸಿ ತಾಲೂಕಿನ ಎಲ್ಲ ೩೦ಸಾವಿರ ಪಂಪ್‌ಸೆಟ್ ಹೊಂದಿರುವ ರೈತರಿಂದ ಸರಕಾರಕ್ಕೆ ಲಿಖಿತ ಮನವಿಪತ್ರ ನೀಡಲು ಹಳ್ಳಿ-ಹಳ್ಳಿಗೆ ಹೋಗಿ ಮನವೊಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ವಿತರಿಸಲು ಹಾಗೂ ಖಾಸಗೀಕರಣ ವಿರೋಧಿಸಿ ಜೂ.೨೨ರಂದು ಒಂದು ಸಾವಿರ ರೈತರು ಸೇರಿ ಕಲ್ಲೇಗೌಡನಪಾಳ್ಯ ಗ್ರಾಮದಿಂದ ತಾಲೂಕು ಕಛೇರಿಗೆ ಜಾಥಾ ಮೂಲಕ ಆಗಮಿಸಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು. ಎಇಇ ಟಿ.ಎಲ್.ಮನೋಹರ್ ಮಾತನಾಡಿ, ಟಾಟಾ ಪವರ್ ಕರ್ನಾಟಕದ ೧೭ ಜಿಲ್ಲೆಗಳಲ್ಲಿ ಬೆಸ್ಕಾಂ ಖಾಸಗೀಕರಣಗೊಳಿಸಿ ಅವಗಳನ್ನು ವಹಿಸಿಕೊಳ್ಳಲು ಸಿದ್ದತೆ ನಡೆದಿದೆ. ಇದೇ ತಿಂಗಳು ೨೩ರಂದು ಟಾಟಾ ಪವರ್ ಸಂಸ್ಥೆಯ ಅರ್ಜಿ ತೀರ್ಮಾನಗೊಳ್ಳಲಿದ್ದು ಅಷ್ಟರಲ್ಲಿ ಎಲ್ಲ ನೌಕರರು, ಗುತ್ತಿಗೆದಾರರು, ರೈತರು ಹಾಗೂ ವಿದ್ಯುತ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ವಿರೋಧ ವ್ಯಕ್ತಪಡಿಸಿಬೇಕು. ಸರಕಾರ ಟಾಟಾ ಪವರ್ ಸಂಸ್ಥೆಯ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಬೆಸ್ಕಾಂ ಲೆಕ್ಕಪತ್ರ ಅಧಿಕಾರಿ ಕುಮಾರಸ್ವಾಮಿ ಮಾತನಾಡಿ ಬೆಸ್ಕಾಂ ಖಾಸಗೀಕರಣಗೊಂಡರೆ ನಮಗೆಲ್ಲಾ ಉದ್ಯೋಗ ಭದ್ರತೆ ಇರುವುದಿಲ್ಲ. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಕ್ಕೆ ಬಿಡಬಾರದು ಎಂದರು. ಬೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ಸೋಮಶೇಖರಗೌಡ, ಬೆಸ್ಕಾಂ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ನಿವೃತ್ತ ನೌಕರರ ಸಂಘದ ತೇಜಮೂರ್ತಿ, ಬೆಸ್ಕಾಂ ಕಲ್ಯಾಣ ಸಮಿತಿ ಅಧ್ಯಕ್ಷ ಓಂಕಾರಮೂರ್ತಿ, ಮಹಿಳಾ ದೂರು ಸಮಿತಿಯ ನೇತ್ರಾವತಿ, ಸ್ಥಳೀಯ ಸಮಿತಿಯ ವಿನಯ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಸವರಾಜು, ನಂದೀಶ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.