ವಿದ್ಯುತ್‌ ಇಲಾಖೆ ಖಾಸಗೀಕರಣಕ್ಕೆ ನೌಕರರ ವಿರೋಧ

KannadaprabhaNewsNetwork |  
Published : Jun 13, 2026, 01:30 AM IST
12 ಟಿವಿಕೆ 1 - ತುರುವೇಕೆರೆಯಲ್ಲಿ ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪಟ್ಟಣದ ಬೆಸ್ಕಾಂ ಇಲಾಕೆ ಸಿಬ್ಬಂದಿಗಳು, ಗುತ್ತಿಗೆದಾರ, ಜಿವಿ.ಪಿ ಸಿಬ್ಬಂದಿಗಳು ಬೆಸ್ಕಾಂ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪಟ್ಟಣದ ಬೆಸ್ಕಾಂ ಇಲಾಖೆ ಸಿಬ್ಬಂದಿಗಳು, ಗುತ್ತಿಗೆದಾರರು, ಜಿವಿ.ಪಿ ಸಿಬ್ಬಂದಿಗಳು ಬೆಸ್ಕಾಂ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪಟ್ಟಣದ ಬೆಸ್ಕಾಂ ಇಲಾಖೆ ಸಿಬ್ಬಂದಿಗಳು, ಗುತ್ತಿಗೆದಾರರು, ಜಿವಿ.ಪಿ ಸಿಬ್ಬಂದಿಗಳು ಬೆಸ್ಕಾಂ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ತುಮಕೂರು ಘಟಕದ ಸಂಘಟನಾ ಸಂಚಾಲಕ ನರಸಿಂಹಯ್ಯ ಮಾತನಾಡಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಅಧಿಸೂಚನೆ ಹೊರಡಿಸಿದ್ದು ಅಕ್ಷೇಪಣೆ ಸಲ್ಲಿಸಲು ಇದೇ ತಿಂಗಳ 23 ರಂದು ಕೊನೆಯ ದಿನವಾಗಿದೆ. ಆದ್ದರಿಂದ ಕೆಇಆರ್ಸಿ ಗೆ ಸಾರ್ವಜನಿಕರು, ರೈತರು ಆಕ್ಷೇಪಣೆ ಸಲ್ಲಿಸುವಂತೆ ಮನವಿ ಮಾಡಿದರು. ನಾವು ಜನರ ಸೇವೆ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಖಾಸಗಿ ಕಂಪನಿಯಾದರೆ ಕೇವಲ ಲಾಭದ ಉದ್ದೇಶದಿಂದ ಕೆಲಸ ಮಾಡುತ್ತವೆ, ಇದರಿಂದ ಸಾಮಾನ್ಯ ಜನರಿಗೆ ಮತ್ತು ಬಡವರ್ಗದವರಿಗೆ ವಿದ್ಯುತ್ ದರ ಹೆಚ್ಚಾಗುತ್ತದೆ. ಹೊಸ ನೇಮಕಾತಿಯೂ ಮಾಡುವುದಿಲ್ಲ. ಖಾಸಗಿ ಕಂಪನಿಗಳಿಗೆ ಬಡ, ಮಧ್ಯಮ ದೀನ ದಲಿತರಿಗೆ ಮೀಸಲಾತಿ ಸಿಗದಂತಾಗುತ್ತದೆ. ಸಣ್ಣ ಮತ್ತು ಮಧ್ಯಮ ಗುಡಿ ಕೈಗಾರಿಕೆಗಳಿಗೆ ವಿದ್ಯುತ್ ದರ ಹೆಚ್ಚಳವಾದರೆ ಕೈಗಾರಿಕೆ ಬೆಳವಣಿಗೆ ಕುಂಠಿತಾಗುತ್ತದೆ. ಸರ್ಕಾರವು ಹಲವು ವರ್ಷಗಳ ಕಾಲ ಸಾರ್ವಜನಿಕರ ಹಣದಿಂದ ನಿರ್ಮಿಸಿದ ವಿದ್ಯುತ್ ಜಾಲ ಮತ್ತು ಮೂಲ ಸೌಕರ್ಯಗಳನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವುದು ನ್ಯಾಯ ಸಮ್ಮತವಲ್ಲ ಎಂದು ಹೇಳಿದರು. ಬೆಸ್ಕಾಂ ಎಇಇ ರಾಜಶೇಖರ್ ಮಾತನಾಡಿ ಖಾಸಗಿ ಕಂಪನಿಗಳು ನಗರ ಮತ್ತು ಲಾಭದಾಯಕ ಪ್ರದೇಶಗಳಿಗೆ ಮಾತ್ರ ಸೇವೆ ನೀಡುವ ಸಾಧ್ಯತೆ ಇದ್ದು, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳು ನಿರ್ಲಕ್ಷ್ಯಕ್ಕೊಳಗಾಗುವ ಸಾಧ್ಯತೆ ಇದೆ. ವಿದ್ಯುತ್ ದರಗಳಲ್ಲಿ ಭಾರಿ ಏರಿಕೆ ಆಗುವ ಸಾಧ್ಯತೆ ಇದೆ. ಖಾಸಗಿ ಸಂಸ್ಥೆಗಳು ಹೆಚ್ಚಿನ ಲಾಭಕ್ಕಾಗಿ ವಿದ್ಯುತ್ ದರಗಳನ್ನು ಹೆಚ್ಚಿಸುವ ಅಪಾಯವಿದೆ. ಇದರಿಂದ ಸಾಮಾನ್ಯ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.ಸಾರ್ವಜನಿಕ ಹಣದಿಂದ ನಿರ್ಮಿಸಿರುವ ವಿದ್ಯುತ್ ಗ್ರಿಡ್, ಕಂಬಗಳು ಮತ್ತು ಮೂಲಸೌಕರ್ಯಗಳನ್ನು ಖಾಸಗಿ ಸಂಸ್ಥೆಗೆ ನೀಡುವುದು ಜನರ ಹಣದ ದುರುಪಯೋಗವಾಗಲಿದೆ. ಗ್ರಾಹಕರಿಗೆ, ರೈತರ ನೀರಾವರಿ ಯೋಜನೆಗಳಿಗೆ ಉಚಿತ ವಿದ್ಯುತ್, ರಿಯಾಯಿತಿ ದರದಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಪೂರೈಸುವುದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿ ಕೃಷಿಗೆ ಅಪಾಯಕಾರಿಯಾಗುತ್ತದೆ. ಅಗತ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತದೆ. ವಿದ್ಯುತ್ ದೇಶದ ಭದ್ರತೆ ಮತ್ತು ಜನರ ಬದುಕಿಗೆ ಅತ್ಯಗತ್ಯವಾಗಿದೆ. ಇದನ್ನು ಖಾಸಗಿ ಲಾಭದ ಉದ್ದೇಶದ ಅಧೀನಕ್ಕೆ ನೀಡುವುದು ರಾಜ್ಯದ ಮತ್ತು ಒಕ್ಕೂಟ ವ್ಯವಸ್ಥೆಯ ಮೂಲಭೂತ ಸೌಕರ್ಯಕ್ಕೆ ಮಾರಕವಾಗುತ್ತದೆ. ಇದನ್ನು ಲಾಭ ಲೆಕ್ಕಾಚಾರವಿಲ್ಲದೆ ಗ್ರಾಹಕರು ಕೈಗಾರಿಕೆ, ಕೃಷಿ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದು, ಖಾಸಗಿಯವರು ಬರೀ ಲಾಭ ಮಾಡುವ ಉದ್ದೇಶ ಹೊಂದಿರುತ್ತಾರೆ.ವಿದ್ಯುತ್ ಕ್ಷೇತ್ರದಲ್ಲಿ ಕೆಲವು ಭಾಗಗಳಲ್ಲಿ ಖಾಸಗಿ ಸಂಸ್ಥೆಗಳು ಪ್ರವೇಶಿಸಿವೆ. ಸಾರ್ವಜನಿಕ ಸೇವೆಗಳ ಮೇಲೆ ಪರಿಣಾಮ ಬೀರುತ್ತಿವೆ. ಕರ್ನಾಟಕದ ಜನರ ಹಿತಾಸಕ್ತಿ, ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ವಿದ್ಯುತ್ ಕಂಪನಿಗಳನ್ನು ಸರ್ಕಾರದ ಅಧೀನದಲ್ಲಿ ಮುಂದುವರೆಸಬೇಕಾಗಿ ಕೋರುತ್ತೇವೆ ಎಂದರು.ಪ್ರತಿಭಟನೆಯಲ್ಲಿ ಎ.ಒ.ಹುಚ್ಚಪ್ಪ, ಎಸ್.ಒ ಗಳಾದ ನಾರಾಣಪ್ಪ, ಉಮೇಶ್ವರಯ್ಯ, ಧರಣೇಶ್, ಜಾನ್, ಕಾಂತರಾಜು ಸಿಬ್ಬಂದಿಗಳಾದ ಅಂಜನ್ ಸ್ವಾಮಿ, ಕಲ್ಲೇಗೌಡ, ವಿನಯ್, ಪುಟ್ಟರಾಜ್, ಭೈರಪ್ಪ ಸೇರಿದಂತೆ ಲೈನ್ ಮೆನ್, ಗ್ಯಾಂಗ್ ಮ್ಯಾನ್ ಹಾಗೂ ನಿವೃತ್ತ ನೌಕರರು ಇದ್ದರು.--------------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೂರಿಯಾ ಅಭಾವ ಖಂಡಿಸಿ ರೈತ ಸಂಘ ಪ್ರತಿಭಟನೆ
ನೀಟ್‌ ಅಕ್ರಮ: ಸಂಸದರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ