ಹೊಳಲ್ಕೆರೆ: ಸಾರ್ವಜನಿಕರ ಬದುಕನ್ನು ನಿಮ್ಮ ಸ್ವಂತ ಬದುಕೆಂದು ಅರ್ಥಮಾಡಿಕೊಂಡು ನಿಮ್ಮ ಬಳಿ ಬರುವವರಿಗೆ ಕೆಲಸ ಮಾಡಿಕೊಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಕಂದಾಯ ಇಲಾಖೆ ನೌಕರರಿಗೆ ಸಲಹೆ ನೀಡಿದರು.
ಸ್ವಾತಂತ್ರ್ಯ ಪೂರ್ವ ನಂತರದಲ್ಲಿ ಎಷ್ಟೋ ದಾಖಲೆಗಳು ಸಿಗುತ್ತಿರಲಿಲ್ಲ. ಹಾಗಾಗಿ ಗಣಕೀಕೃತ ಕಾಗದ ಪತ್ರಗಳಿಗೆ ಈಗ ಬಹಳ ಪ್ರಾಮುಖ್ಯತೆಯಿದೆ. ಕಂದಾಯ ಇಲಾಖೆ ನೌಕರರ ಮೇಲೆ ಸಾರ್ವಜನಿಕರಿಂದ ಸಾಕಷ್ಟು ಆಕ್ಷೇಪಣೆಗಳಿವೆ. ಜನಸಾಮಾನ್ಯರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮುಟ್ಟಿಸುವುದಕ್ಕಾಗಿ ಸರ್ಕಾರ ನಿಮಗೆ ಲ್ಯಾಪ್‍ಟಾಪ್‍ಗಳನ್ನು ಕೊಟ್ಟಿದೆ. ಬಳಸಿಕೊಂಡು ಸರಿಯಾಗಿ ಕೆಲಸ ಮಾಡಿ ಎಂದು ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.
ಜನನ, ಮರಣ ಪ್ರಮಾಣಪತ್ರಗಳಿಂದ ಹಿಡಿದು ಪಹಣಿ, ಆಸ್ತಿ ಹದ್ದುಬಸ್ತು ಪ್ರತಿಯೊಂದು ನಿಮ್ಮ ಕೈಯಿಂದಲೇ ಆಗಬೇಕು. ನೀವುಗಳು ನ್ಯಾಯಯುತವಾದ ಬೇಡಿಕೆಗಳಿಗೆ ಮುಷ್ಕರ ನಡೆಸುವುದು ತಪ್ಪಲ್ಲ. ಸರ್ಕಾರ ಕೂಡ ನಿಮಗೆ ಸ್ಪಂದಿಸಿದೆ. ಸಾರ್ವಜನಿಕರು ವಿಶ್ವಾಸವಿಟ್ಟು ನಿಮ್ಮ ಬಳಿ ಬರುತ್ತಾರೆ. ಕೆಲಸದ ನಿಮಿತ್ತ ಕಚೇರಿಗೆ ಬರುವವರನ್ನು ವಿನಾ ಕಾರಣ ಅಲೆದಾಡಿಸಬೇಡಿ. ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಟ್ಟಾಗ ನಿಮ್ಮನ್ನು ಗೌರವದಿಂದ ಕಾಣುತ್ತಾರೆಂದರು.ಚಳ್ಳಕೆರೆ ತಾಲೂಕಿನಲ್ಲಿರುವ ಡಿಆರ್‌ಡಿಒದಲ್ಲಿ ಯುದ್ದ ಸಾಮಾಗ್ರಿಗಳನ್ನು ತಯಾರಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಪ್ರತಿ ವರ್ಷವೂ ಹತ್ತು ಲಕ್ಷ ಕೋಟಿ ರು. ಖರ್ಚಾಗುತ್ತದೆ. ಇದು ಹೆಮ್ಮೆಯ ವಿಷಯ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ತಹಸೀಲ್ದಾರ್ ಬೀಬಿ ಫಾತಿಮ, ಸಿಬ್ಬಂದಿ ವರ್ಗದವರು ಹಾಜರಿದ್ದರು.