ಹುಬ್ಬಳ್ಳಿ: ಸಂಸ್ಥೆಯ ನೌಕರರು ತಮ್ಮ ಮಕ್ಕಳ ಪಾಲನೆ- ಪೋಷಣೆ ಮಾಡಿಕೊಳ್ಳಲು ಸಂಸ್ಥೆಯ ವತಿಯಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ಧ. ಅವರ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಬೇಕೆನ್ನುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ ಹೇಳಿದರು.
ಅವರು ಇಲ್ಲಿನ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ ಹುಬ್ಬಳ್ಳಿಯಲ್ಲಿ ಗಂಭೀರ ಕಾಯಿಲೆ ಮತ್ತು ಮಾನಸಿಕ, ಬುದ್ದಿಮಾಂಧ್ಯ, ಅಂಗವಿಕಲತೆಯಿಂದ ಬಳಲುತ್ತಿರುವ ಮಕ್ಕಳ ಪೋಷಣಾ ನೌಕರರಿಗೆ ಮನೋವೈದ್ಯಕೀಯ ಸಲಹೆಗಾರರಿಂದ ಆಪ್ತ ಸಮಾಲೋಚನೆ ಹಾಗೂ ಅಂತಹ ನೌಕರರ ಕುಂದುಕೊರತೆ ಆಲಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂಸ್ಥೆಯು ಯಾವಾಗಲೂ ನೌಕರರ ಕಲ್ಯಾಣಕ್ಕಾಗಿ ತುಡಿಯುತ್ತಿರುತ್ತದೆ. ಜಗತ್ತಿನಲ್ಲಿ ಮಕ್ಕಳನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ತಂದೆ- ತಾಯಿಗಳು ನಾವಾಗಿದ್ದೇವೆ. ಧ್ಯೆರ್ಯ ಮತ್ತು ಆತ್ಮವಿಶ್ವಾಸದಿಂದ ಮಕ್ಕಳನ್ನು ಬೆಳೆಸಿ, ಪೋಷಿಸಿ ಎಂದು ಕಿವಿಮಾತು ಹೇಳಿದರು.
ಗಂಭೀರ ಕಾಯಿಲೆ ಮತ್ತು ಮಾನಸಿಕ, ಬುದ್ದಿಮಾಂಧ್ಯ, ಅಂಗವಿಕಲತೆಯಿಂದ ಬಳಲುತ್ತಿರುವ ಮಕ್ಕಳ ಪೋಷಣಾ ನೌಕರರ ಒಳತಿಗಾಗಿ, ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ ನಿಮ್ಮಲ್ಲಿರುವ ಸಮಸ್ಯೆಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನ ಪಡೆಯುವದಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಮಾತನಾಡಿ, ಇದೊಂದು ಒಳ್ಳೆಯ ಕಾರ್ಯಕ್ರಮ, ನೌಕರರು ತಮ್ಮ ದೈನಂದಿನ ಕರ್ತವ್ಯ ನಿರ್ವಹಿಸಬೇಕಾದರೆ ತಮ್ಮ ಮಕ್ಕಳು ಮತ್ತು ಕುಟುಂಬದವರು ಆರೋಗ್ಯದಿಂದ ಇದ್ದರೆ ಮಾತ್ರ ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಆದ್ದರಿಂದ ತಮಗೆ ತಮ್ಮ ಮಕ್ಕಳಿಗೆ ಆದ ಸಮಸ್ಯೆಯನ್ನು ಮುಕ್ತವಾಗಿ ಚರ್ಚಿಸಿ, ಸಂಸ್ಥೆಯ ನಿಯಮಾನುಸಾರ ಸಾಧ್ಯವಾದಷ್ಟು ತಮಗೆ ಸಹಾಯ ಮಾಡಲಾಗುವುದು ಎಂದರು.
ಕೆಎಂಸಿಆರ್‌ಐನ ಆಪ್ತ ಸಮಾಲೋಚಕಿ ಮಂಗಲಾ ಎಸ್. ಗರ್ಗೆ ಮಾತನಾಡಿ, ಗಂಭೀರ ಕಾಯಿಲೆ ಮತ್ತು ಮಾನಸಿಕ ಬುದ್ದಿಮಾಂದ್ಯ ಅಂಗವಿಕಲತೆಯಿಂದ ಬಳಲುತ್ತಿರುವ ಮಕ್ಕಳ ಪೋಷಣಾ ನೌಕರರಿಗೆ ಆಹಾರ ಪದ್ದತಿಯ ಕುರಿತು, ಸಮತೋಲಿತ ಜೀವನ ಪದ್ದತಿ, ಮಕ್ಕಳ ಪಾಲನೆ ಪೋಷಣೆ ಮಾಡುವ ಕ್ರಮ, ಮಾನಸಿಕ ಹಾಗೂ ದೈಹಿಕ ಸದೃಢತೆಯ ಕುರಿತು ಸಂಸ್ಥೆಯ ನೌಕರರೊಡನೆ ಸಂವಾದಿಸಿದರು.ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ವೈ. ನಾಯಕ, ಸಿದ್ದೇಶ್ವರ ಹೆಬ್ಬಾಳ, ಶ್ರೀನಿವಾಸ್ ಮೂರ್ತಿ. ಗೌರಿಶಂಕರ ರಾಯಜಿ, ಅಧಿಕಾರಿಗಳಾದ ನವೀನಕುಮಾರ ತಿಪ್ಪಾ ಹಾಗೂ ವಿ.ಎಫ್. ಬಿಜಾಪೂರ, ವಿರೂಪಾಕ್ಷ ಕಟ್ಟಿಮನಿ, ಇಮ್ತಿಯಾಜ ರಮಜಾನವರ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳಿದ್ದರು. ಪಿ.ವೈ. ನಾಯಕ್ ಸ್ವಾಗತಿಸಿದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು. ನವೀನಕುಮಾರ ತಿಪ್ಪಾ ವಂದಿಸಿದರು.