ನೌಕರರ ರಾಜ್ಯಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗೆ ಸಂಭ್ರಮದ ತೆರೆ

KannadaprabhaNewsNetwork | Published : May 21, 2025 2:25 AM
ಶಿವಮೊಗ್ಗ: ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಮಂಗಳವಾರ ಸಂಭ್ರಮದ ತೆರೆ ಬಿದ್ದಿತು.
Follow Us

ಶಿವಮೊಗ್ಗ: ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಮಂಗಳವಾರ ಸಂಭ್ರಮದ ತೆರೆ ಬಿದ್ದಿತು.

ಮೂರು ದಿನಗಳ ಕಾಲ ನಡೆದ ಕೀಡಾಕೂಟದಲ್ಲಿ ಸಾವಿರಾರು ಸಂಖ್ಯೆ ನೌಕರರು ಅತ್ಯುತ್ಸಾಹದಿಂದ ಭಾಗವಹಿಸಿ ಪದಕಗಳನ್ನು ಮುಡಿಗೇರಿಸಿಕೊಂಡರು. ಈ ಮೂಲಕ ಎಲ್ಲ ಇಲಾಖೆಯ ಸಿಬ್ಬಂದಿ ಒಗ್ಗಟ್ಟು ಪ್ರದರ್ಶಿಸಿದರು. ವಿವಿಧ ಕ್ರೀಡಾ ವಿಭಾಗಗಳಲ್ಲಿ, ಸಾಂಸ್ಕೃತಿಕ ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸಮಾರೋಪದಲ್ಲಿ ಬಹುಮಾನ ನೀಡಲಾಯಿತು.

100 ಮೀಟರ್‌ ಓಟ, ಥ್ರೋಬಾಲ್‌, ಗುಂಡು ಎಸೆತ, ವಾಲಿಬಾಲ್‌ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದರು.

ಬೆಂಗಳೂರು ನಗರ ಪ್ರಥಮ:

ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಪೈಕಿ ಅತಿ ಹೆಚ್ಚು ಬಹುಮಾನ ಪಡೆದ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ನಗರ (146 ಸ್ಥಾನ) ಪ್ರಥಮದಲ್ಲಿದ್ದರೆ, ಕ್ರೀಡಾಕೂಟದ ಆತಿಥ್ಯ ವಹಿಸಿದ ಶಿವಮೊಗ್ಗ ಜಿಲ್ಲೆ (116 ಸ್ಥಾನ) ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದೆ. ಬೆಂಗಳೂರು ನಗರ ಜಿಲ್ಲೆಯ ಸ್ಪರ್ಧಿಗಳು ಒಟ್ಟು 95 ಸ್ಪರ್ಧೆಗಳಲ್ಲಿ ಪ್ರಥಮ, 31 ಸ್ವಿತೀಯ, 20ರಲ್ಲಿ ತೃತೀಯ ಸ್ಥಾನಗಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳು ಒಟ್ಟು 41 ಸ್ಪರ್ಧೆಯಲ್ಲಿ ಪ್ರಥಮ, 54ರಲ್ಲಿ ದ್ವಿತೀಯ, 21ರಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಹಾಸನ ಜಿಲ್ಲಾ ಕ್ರೀಡಾಪಟುಗಳು ಒಟ್ಟು 25 ಸ್ಪರ್ಧೆಯಲ್ಲಿ ಪ್ರಥಮ, 28ರಲ್ಲಿ ದ್ವಿತೀಯ, 21ರಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಉಡುಪಿ ಜಿಲ್ಲಾ ಕ್ರೀಡಾಪಟುಗಳು ಒಟ್ಟು 18 ಸ್ಪರ್ಧೆಗಳಲ್ಲಿ ಪ್ರಥಮ, 9ರಲ್ಲಿ ದ್ವಿತೀಯ, 6ರಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ದಾವಣಗೆರೆ, ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರು, ಧಾರವಾಡ, ಹಾವೇರಿ, ಬೀದರ್‌, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ಕಾರವಾರ, ಕಲಬುರಗಿ, ಕೋಲಾರ, ಬಾಗಲಕೋಟೆ, ಕೊಡಗು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ಬಳ್ಳಾರಿ, ರಾಮನಗರ, ವಿಜಯಪುರ, ಕರ್ನಾಟಕ ಸರ್ಕಾರ ಸಚಿವಾಲಯ, ವಿಜಯನಗರ, ಚಿಕ್ಕಬಳ್ಳಾಪುರ, ಗದಗ ಜಿಲ್ಲೆಗಳು ಸ್ಥಾನ ಪಡೆದುಕೊಂಡಿವೆ.