ದೇವಿ ವಿಗ್ರಹಕ್ಕೆ ದೃಷ್ಟಿ ಇಡುವ ಕಾರ್ಯಕ್ರಮ । ಅದ್ದೂರಿ ಮೆರವಣಿಗೆ । ಮೂರು ದಿನ ಉತ್ಸವ । ಸಾವಿರಾರು ಭಕ್ತರು ಭಾಗಿ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಮೂರು ದಿನಗಳ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಅದ್ದೂರಿಯಾಗಿ ಚಾಲನೆ ದೊರೆಯಿತು.
ಬೆಳಿಗ್ಗೆ ಮಾರಿಗದ್ದುಗೆಯಿಂದ ಗಣಮಗನೊಂದಿಗೆ ಮೇದರಬೀದಿ ಶ್ರೀ ಅಂತರಘಟ್ಟಮ್ಮ, ಮಡಬೂರು ಶ್ರೀ ದಾನಿಸವಾಸ ದುರ್ಗಾಂಬ ದೇವಿ ಹಾಗೂ ಹಳೇಪೇಟೆ ಶ್ರೀ ಗುತ್ಯಮ್ಮ ದೇವತೆಗಳು ಪಲ್ಲಕ್ಕಿ ಸಮೇತವಾಗಿ ಅರಸೀಕೆರೆಯ ಕುಮಾರಯ್ಯ ಮತ್ತು ಸಂಗಡಿಗರ ಚಟ್ಟಿಮೇಳದ ಮೆರವಣಿಗೆ ಮೂಲಕ ಪಟ್ಟಣದ ಸುಂಕದ ಕಟ್ಟೆಯಲ್ಲಿರುವ ಶ್ರೀ ಮಾರಿಯಮ್ಮನ ಗದ್ದುಗೆಗೆ ಬರಲಾಯಿತು. ಮಾರಿ ವಿಗ್ರಹಕ್ಕೆ ದೃಷ್ಟಿಯಿಡುವ ಸ್ಥಳದಲ್ಲಿ ಊರಿನ ಹಾಗೂ ಪರ ಊರಿನಿಂದಲೂ ಆಗಮಿಸಿದ ಸಾವಿರಾರು ಜನ ಭಕ್ತಾದಿಗಳು ಜಮಾಯಿಸಿದ್ದರು. ದೇವಿಗೆ ವಿಗ್ರಹ ಕೆತ್ತಿದ ಕುಟುಂಬದವರಿಂದ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವಿಗೆ ದೃಷ್ಟಿಯಿಡುತ್ತಿದ್ದಂತೆ ದೇವಿಗೆ ನೇರವಾಗಿ 50ರಿಂದ 60 ಅಡಿ ದೂರದಲ್ಲಿ ಇಟ್ಟಿದ್ದ ಹುಲ್ಲಿಗೆ ದಿಢೀರ್ ಎಂದು ಬೆಂಕಿ ಕಾಣಿಸಿಕೊಂಡು ಹಲ್ಲು ಹೊತ್ತಿ ಉರಿಯುವ ಪವಾಡ ನಡೆಯಿತು. ಅಲ್ಲಿ ಸೇರಿದ್ದ ಸಾವಿರಾರು ಭಕ್ತರು ಆ ಕ್ಷಣಕ್ಕೆ ಸಾಕ್ಷಿಯಾದರು.ನಂತರ ದೇವಿಯ ವಿಗ್ರಹವನ್ನು ಬೃಹತ್ ಮೆರವಣಿಗೆ ಮೂಲಕ ಅಗ್ರಹಾರದ ಶ್ರೀ ಉಮಾಮಹೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಮಾರಿಗದ್ದುಗೆಗೆ ವಾದ್ಯಗೋಷ್ಠಿಯೊಂದಿಗೆ, ಗ್ರಾಮ ದೇವತೆಗಳೊಂದಿಗೆ ತಂದು ಪ್ರತಿಷ್ಠಾಪನೆ ಮಾಡಲಾಯಿತು. ಅಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ವಿಶೇಷ ಪೂಜೆ, ಪುನಸ್ಕಾರಗಳು ಜರುಗಿದವು. ಮದ್ಯಾಹ್ನ ಎಲ್ಲಾ ಭಕ್ತಾಧಿಗಳಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯಿತು. ರಾತ್ರಿ ದೇವಿಗೆ ಹರಕೆ ಕಾಣಿಕೆ, ಬಾಗಿನ, ಮಡಲಕ್ಕಿ ತುಂಬುವ ಕಾರ್ಯ ನಡೆಯಿತು. ದೃಷ್ಟಿ ಇಡುವ ಕಾರ್ಯಕ್ರಮದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಜಾತ್ರಾ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ, ಜಾತ್ರಾ ಸಮಿತಿ ಎಲ್ಲಾ ಪದಾಧಿಕಾರಿಗಳು, ಗಣ್ಯರು, ಸಾವಿರಾರು ಭಕ್ತರು ಪಾಲ್ಗೊಂಡರು.
ರಾತ್ರಿ ದೇವಿಯನ್ನು ಉಡುಪಿಯ ಕಿಶೋರ್ ರಾಜ್ ಅವರ ಪ್ರಭು ನಾಸಿಕ್ ಟ್ಯಾಬ್ಲೋ, ಉಡುಪಿಯ ಥಾಯ್ಲೆಂಡ್ ಟೈಗರ್ ಗ್ರೂಪ್ ಇವರಿಂದ ಆಕರ್ಷಕ ರೋಡ್ ಶೋ, ದೊಡ್ಡ ನಂದಿ, ಶಿವಪಾರ್ವತಿ, ಚಿಕ್ಕಹನುಮ, ಕಾಳ ಭೈರವ, ಅಘೋರಿ, ಕಂಬಳ, ಜೋಡಿ ಎತ್ತು, ಹನುಮ ಮತ್ತು ವಾನರ ಸೇನೆ, ಡಿಜೆ ಕಾರ್ಯಕ್ರಮ, ಅತ್ಯಾಕರ್ಷಕ ಸ್ತಬ್ಧ ಚಿತ್ರಗಳು, ಸಿಡಿಮದ್ದಿನ ಪ್ರದರ್ಶನಗಳೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ಶ್ರೀ ಕೋಟೆ ಮಾರಿಕಾಂಬ ದೇವಿ ಮೂರ್ತಿಯನ್ನು ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ರಾತ್ರಿ ಗಾಯಕ ಸುಧೀ ಮತ್ತು ತಂಡದವರಿಂದ ವಿಶೇಷ ಸಂಗೀತ ವೈಭವ ಕಾರ್ಯಕ್ರಮ ನಡೆಯಿತು.