ನೌಕರರ ಮುಷ್ಕರ: ಗ್ರಾಪಂ ಸೇವಾ ಸೌಲಭ್ಯ ಬಂದ್‌

KannadaprabhaNewsNetwork | Published : Oct 8, 2024 1:15 AM

ಸಾರಾಂಶ

ಬಂಗಾರಪೇಟೆ ತಾಲೂಕಿನಲ್ಲಿ ಒಟ್ಟು ೨೧ ಗ್ರಾಮ ಪಂಚಾಯಿತಿಗಳಿದ್ದು, ಸರ್ಕಾರದ ಸುಮಾರು ಶೇ ೬೦ರಷ್ಟು ಯೋಜನೆಗಳ ಸೇವೆಗಳನ್ನು ಇದರ ಮೂಲಕ ಜನರಿಗೆ ನೀಡಲಾಗುತ್ತಿತ್ತು. ಈಗ ಗ್ರಾಪಂ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನವನ್ನು ಸೆಳೆಯಲು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿದಂತೆ ಇತರೆ ಸಿಬ್ಬಂದಿ ವರ್ಗ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದಿರುವುದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಸೇವೆ ದೊರಕದಂತಾಗಿದೆ. ತಾಲೂಕಿನಲ್ಲಿ ಒಟ್ಟು ೨೧ ಗ್ರಾಮ ಪಂಚಾಯಿತಿಗಳಿದ್ದು, ಸರ್ಕಾರದ ಸುಮಾರು ಶೇ ೬೦ರಷ್ಟು ಯೋಜನೆಗಳ ಸೇವೆಗಳನ್ನು ಇದರ ಮೂಲಕ ಜನರಿಗೆ ನೀಡಲಾಗುತ್ತಿತ್ತು. ಈಗ ಗ್ರಾಮ ಆಡಳಿತಾಧಿಕಾರಿಗಳ ನಂತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪಂಚಾಯಿತಿಗಳ ಸಿಬ್ಬಂದಿ ಸರ್ಕಾರದ ಗಮನವನ್ನು ಸೆಳೆಯಲು ಪ್ರತಿಭಟನೆ ನಡೆಸುತ್ತಿದ್ದಾರೆ.

ಗ್ರಾಪಂ ಸೇವಾ ಸೌಲಭ್ಯ ಸ್ಥಗಿತ

ಪ್ರತಿಭಟನೆಗೆ ತಾಲೂಕಿನ ಎಲ್ಲ ಗ್ರಾಪಂ ನೌಕರರು, ಸಿಬ್ಬಂದಿ ಸಾತ್ ನೀಡಿದ್ದು, ಪಂಚಾಯಿತಿ ಕಚೇರಿಗಳು ಖಾಲಿ ಖಾಲಿಯಾಗಿವೆ. ಪಂಚಾಯಿತಿಗಳಲ್ಲಿ ದೊರಕುತ್ತಿದ್ದಂತಹ ಈ ಸ್ವತ್ತು, ನರೇಗಾ ಯೋಜನೆ, ಪಂಚತಂತ್ರದ ಹಲವು ಯೋಜನೆಗಳು ಸೇರಿದಂತೆ ಎಲ್ಲಾ ಸೇವೆಗಳು ನಾಗರೀಕರಿಂದ ದೂರವಾಗಿವೆ. ಪಂಚಾಯಿತಿ ಸಿಬ್ಬಂದಿ ಪ್ರತಿಭಟನೆಗೆ ಹೋಗಿರುವುದರಿಂದ ಕೆಲವು ಪಂಚಾಯಿತಿಗಳಿಗೆ ಬೀಗ ಜಡಿದಿದ್ದರೆ ಹಲವು ಪಂಚಾಯಿತಿಗಳು ಬೀಗ ತೆರೆದಿದೆಯಾದರೂ ಯಾವುದೇ ಸೇವಾ ಸೌಲಭ್ಯ ದೊರಕುತ್ತಿಲ್ಲ.

ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಬಂದು ಬರಿ ಕೈಲಿ ವಾಪಸ್ಸು ಹೋಗುವುದು ಸಾಮಾನ್ಯವಾಗಿದೆ. ರಾಜ್ಯ ಸಂಘದ ಕಟ್ಟಪ್ಪನೆಯಂತೆ ಸಿಬ್ಬಂದಿಗಳು ಪ್ರತಿಭಟನೆಗೆ ಹಾಜರಿದ್ದರು. ಸೋಮವಾರ ಸಹ ಪ್ರತಿಭಟನೆ ಮುಂದುವರೆದಿದ್ದು, ಸೇವೆಗಳಿಗೆ ಜನರು ಮತ್ತಷ್ಟು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮೆಲ್ಲರ ಬಹುದಿನಗಳ ಬೇಡಿಕೆಯನ್ನು ಸರ್ಕಾರದ ಗಮನ ಸೆಳೆಯಲು ದೈನಂದಿನ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಹೋರಾಟ ಮಾಡುತ್ತಿದ್ದೇವೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ ಎಂಬ ನಂಬಿಕೆ ಇದೆ. ಮಂಗಳವಾರ ಸಹ ಪ್ರತಿಭಟನೆ ಮುಂದುವರೆಯಲಿದ್ದು, ರಾಜ್ಯ ಸಂಘಟನೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿದ್ದೇವೆ ಪಿಡಿಒ ಸಂಘದ ಅಧ್ಯಕ್ಷ ವೇಣು ತಿಳಿಸಿದ್ದಾರೆ.

Share this article