ಕನ್ನಡಪ್ರಭ ವಾರ್ತೆ ಹೊಸದುರ್ಗ
ನಕಲಿ ಫೋನ್ ಪೇ ಮೂಲಕ ಸ್ಕ್ಯಾನ್ ಮಾಡಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಶ್ರೀರಾಂಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಬಂಧಿತರನ್ನು ಚಿತ್ರದುರ್ಗ ನಗರದ ನಿವಾಸಿ ಧೀರಜ್ ( 21), ತರುಣ್ (20), ಹಾಗೂ ತುರವನೂರು ಹೋಬಳಿ ಗೊಲ್ಲರಹಟ್ಟಿ ಗ್ರಾಮದ ಕಿರಣ್ (24) ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಗೊಲ್ಲರಹಟ್ಟಿಯ ಶಿವಕುಮಾರ (28) ಹಾಗೂ ಚಿತ್ರದುರ್ಗ ತಾಲೂಕು ಮಾಳಪ್ಪನಹಟ್ಟಿ ಗ್ರಾಮದ ದೇವರಾಜ (28) ಈ ಇಬ್ಬರ ಮೇಲೂ ದೂರು ದಾಖಲಾಗಿದ್ದು ತಲೆ ಮರೆಸಿಕೊಂಡಿದ್ದಾರೆ.
ಬಂಧಿತರು ಅ.4ರಂದು ಬೆಲಗೂರು ಹಾಗೂ ಶ್ರೀರಾಂಪುರ ಗ್ರಾಮದಲ್ಲಿ, 3 ಅಂಗಡಿಗಳಲ್ಲಿ ಸುಮಾರು ₹22 ಸಾವಿರ ಮೌಲ್ಯದ ಗುಟ್ಕಾ, ಸಿಗರೇಟ್ ಖರೀದಿ ಮಾಡಿ ಅಂಗಡಿಯ ಫೋನ್ ಪೇ ಸ್ಕ್ಯಾನರ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಈ ಸಂಬಂಧ ಅಂಗಡಿ ಮಾಲೀಕರ ಮೊಬೈಲ್ ನಂಬರಿಗೂ ಹಣ ವರ್ಗಾವಣೆ ಆದ ಬಗ್ಗೆ ಮೇಸೇಜ್ ಬಂದಿದೆ. ಆದರೆ ಬ್ಯಾಂಕಿಗೆ ಹಣ ಜಮಾ ಆಗಿಲ್ಲ. ಈ ಬಗ್ಗೆ ಅನುಮಾನಗೊಂಡ ಅಂಗಡಿ ಮಾಲೀಕರು ಕೂಡಲೇ ಶ್ರೀರಾಂಪುರ ಪೋಲೀಸರಿಗೆ ಅ.4 ರಂದು ದೂರು ನೀಡಿದ್ದರು.ಈ ಹಿನ್ನಲೆ ಶ್ರೀರಾಂಪುರ ಪೋಲೀಸರು ತನಿಖೆ ನಡೆಸಿ ಹುಳಿಯಾರು ಬಸ್ ನಿಲ್ದಾಣದಲ್ಲಿದ್ದ ಮೂವರು ಆರೋಪಿತರನ್ನು ಬಂಧಿಸಿ, ಬಂಧಿತರಿಂದ ₹10 ಲಕ್ಷ ಮೌಲ್ಯದ ಎರಿಟಿಗಾ ಕಾರು, ಹಾಗೂ ವಂಚನೆ ಮಾಡಿದ್ದ ₹22030 ಮೌಲ್ಯದ ಮಾದಕ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಗ್ರಾಹಕರ ಸೋಗಿನಲ್ಲಿ ಬರುವ ವಂಚಕರು ನಕಲಿ ಫೋನ್ ಪೇ ಅಪ್ಲಿಕೇಷನ್ ಮೂಲಕ ಅಂಗಡಿ ಮಾಲೀಕರ ಫೋನ್ ಪೇ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡುತ್ತಾರೆ. ಅಂಗಡಿ ಮಾಲೀಕರಿಗೆ ಹಣ ಸಂದಾಯವಾದಂತೆ ಮೆಸೇಜ್ ಸಹಾ ಹೋಗುತ್ತದೆ. ಆದರೆ ಅಕೌಂಟ್‌ಗೆ ಜಮಾ ಆಗಿರುವುದಿಲ್ಲ.ಆದುದರಿಂದ ಸಾರ್ವಜನಿಕರು ಹಣ ಸಂದಾಯವಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಹಾಗೂ ಆನ್ ಲೈನ್ ಮೂಲಕ ವ್ಯವಹಾರ - ವಹಿವಾಟು ನಡೆಸುವಾಗ ಜಾಗರೂಕತೆಯಿಂದ ನಿರ್ವಹಿಸುವಂತೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರು ಬಂಡಾರು ತಿಳಿಸಿದ್ದಾರೆ.