ಜಾತಿನಿಂದನೆ ಸುಳ್ಳು ಪ್ರಕರಣ, ಹಿಂಪಡೆಯಲು ನೌಕರರ ಸಂಘ ಒತ್ತಾಯ

KannadaprabhaNewsNetwork |  
Published : Feb 22, 2024, 01:51 AM IST
ಫೋಟೋ:19ಕೆಪಿಎಸ್ಎನ್ಡಿ5 | Kannada Prabha

ಸಾರಾಂಶ

ಸಮಾಜ ಕಲ್ಯಾಣ ಇಲಾಖೆಯ ವಿಜಯಾ, ಹಾಸ್ಟೆಲ್‌ ಮೇಲ್ವಿಚಾರಕ ರವಿಚಂದ್ರ ವಿರುದ್ಧ ನೀಡಿದ್ದ ದೂರು ವಾಪಸ್‌ಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಸಿಂಧನೂರಿನಲ್ಲಿ ಪ್ರತಿಭಟನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕಿ ವಿಜಯಾ ಹಾಗೂ ಹಾಸ್ಟೆಲ್ ಮೇಲ್ವಿಚಾರಕ ರವಿಚಂದ್ರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಜಾತಿ ನಿಂದನೆ ಪ್ರಕರಣ ಸುಳ್ಳಿನಿಂದ ಕೂಡಿರುವುದರಿಂದ ತಕ್ಷಣ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಇಲ್ಲಿನ ಮಿನಿವಿಧಾನಸೌಧ ಕಚೇರಿ ಮುಂದೆ ಪ್ರತಿಭಟಿಸಿ ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ರವಾನಿಸಿತು.

ಫೆ.15ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ಪಿಡಬ್ಲ್ಯೂಡಿ ಕ್ಯಾಂಪಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹಿರೇಹುಸೇನಪ್ಪ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಇದನ್ನೇ ನೆಪವಾಗಿಟ್ಟುಕೊಂಡು ಷಡ್ಯಂತ್ರ ರೂಪಿಸಿ ಅಧಿಕಾರಿಗಳ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸುವ ಮೂಲಕ ಕಾಯ್ದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು.

ಪೊಲೀಸರು ಪ್ರಾಥಮಿಕ ತನಿಖೆ ನಡೆಸದೆ ಜಾತಿ ನಿಂದನೆ ಕಾಯ್ದೆಯಡಿ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯವಾಗಿದೆ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಇಂತಹ ಪ್ರಕರಣಗಳಲ್ಲಿ ಜಾತಿ ನಿಂದನೆ ಕಾಯ್ದೆಯ ದುರ್ಬಳಕೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಸರ್ಕಾರಿ ನೌಕರರು, ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಈ ರೀತಿ ಸುಳ್ಳು ಕೇಸ್‌ಗಳು ದಾಖಲಿಸದಂತೆ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಿ, ನೌಕರರಿಗೆ ನೈತಿಕ ಬೆಂಬಲ ಮತ್ತು ಆತ್ಮಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಪದಾಧಿಕಾರಿಗಳಾದ ಶಶಿಧರ್ ಹಳ್ಳಿ, ಭರತಕುಮಾರ, ದೊಡ್ಡಲಿಂಗಪ್ಪ ಸೇರಿ ಅನೇಕರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ