ಮಹಿಳೆಯರಿಗೆ ಶಿಕ್ಷಣವು ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುವ ಮೂಲಕ ಸಮಾಜದ ಅಭಿವೃದ್ಧಿಯನ್ನು ತಲುಪಲು ಸಹಾಯ ಮಾಡಲಿದೆ ಎಂದು ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪಿ.ಬಿ. ಸಿಂಧು ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಮಹಿಳೆಯರಿಗೆ ಶಿಕ್ಷಣವು ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುವ ಮೂಲಕ ಸಮಾಜದ ಅಭಿವೃದ್ಧಿಯನ್ನು ತಲುಪಲು ಸಹಾಯ ಮಾಡಲಿದೆ ಎಂದು ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪಿ.ಬಿ. ಸಿಂಧು ತಿಳಿಸಿದರು. ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಗಡಿಗ್ರಾಮ ಹಾಗಲವಾಡಿಯಲ್ಲಿ ಆಯೋಜಿಸಿದ್ದ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಅಂಗವಾಗಿ ಅಣಬೆ ಕೃಷಿಯ ಕೌಶಲ್ಯಾಧರಿತ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮತೋಲನ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಸಲುವಾಗಿ ಈ ವರ್ಷ ಅಂತಾರಾಷ್ಟೀಯ ಮಹಿಳಾ ದಿನಾಚರಣೆಯನ್ನು ಎಲ್ಲಾ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳು, ಸಮಾನತೆ ಮತ್ತು ಸಬಲೀಕರಣ ಎಂಬ ಘೋಷಣೆಯೊಂದಿಗೆ ಆಚರಿಸಲಾಗಿದೆ ಎಂದರು. ಅಣಬೆ ಕೃಷಿ ಕಡಿಮೆ ಹೂಡಿಕೆ, ಹೆಚ್ಚು ಲಾಭ ಸಿಗಲಿದೆ. ಚಿಕ್ಕ ಸ್ಥಳದಲ್ಲೂ ಬೆಳೆಯುವ ಅವಕಾಶ, ಪೌಷ್ಟಿಕಾಂಶದಿಂದ ಸಮೃದ್ದ ಆಹಾರ, ವ್ಯಾಪಾರ ಹೆಚ್ಚುವಿಕೆ ಅವಕಾಶಗಳು ಹಾಗೂ ಮಹಿಳಾ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗಲಿದೆ. ಶೇ.೯೦ರಷ್ಟು ನೀರಿಲ್ಲದ ಕೃಷಿಯಾಗಿದ್ದು, ಇದು ಪರಿಸರಕ್ಕೆ ಸೂಕ್ತವಾಗಿರುತ್ತದೆ. ಮಹಿಳೆಯರು ಮನೆಮಟ್ಟದಲ್ಲಿ ಅಥವಾ ಕೈಗಾರಿಕಾ ಮಟ್ಟದಲ್ಲಿ ಇದನ್ನು ಯಶಸ್ವಿಯಾಗಿ ಮಾಡಬಹುದು. ತರಬೇತಿ ಕಾರ್ಯಕ್ರಮದಿಂದ ಗ್ರಾಮೀಣ ಮಹಿಳೆಯರು ಕೇವಲ ಕೃಷಿಯಲ್ಲಿ ಮಾತ್ರವಲ್ಲ ಸ್ವಾವಲಂಬನೆ ಮತ್ತು ಸೃಜನಾತ್ಮಕ ಉದ್ಯಮಶೀಲತೆಯತ್ತ ಒಲವು ತೋರಿಸಲು ಸಹಾಯವಾಗಲಿದೆ. ಸಮಾನತೆ, ಆರ್ಥಿಕ ಅಭಿವೃದ್ಧಿ ಹಾಗೂ ಸಬಲೀಕರಣದತ್ತ ಮಹಿಳೆಯರ ಹೆಜ್ಜೆ ಇಡಲು ಪ್ರೇರೇಪಿಸಲಿದೆ. ಅಣಬೆಯಲ್ಲಿ ಪ್ರೋಟೀನ್ ಹೇರಳವಾಗಿರುವುದರಿಂದ ಇದು ಮಹಿಳೆಯರ ಸ್ನಾಯು ಆರೋಗ್ಯ ಮತ್ತು ಶಕ್ತಿ ವೃದ್ಧಿಗೆ ಸಹಾಯಕಾರಿ. ರಕ್ತಹೀನತೆ ತಡೆಯಲು ಅಗತ್ಯವಾದ ಕಬ್ಬಿಣ, ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ, ರಕ್ತದೊತ್ತಡ ನಿಯಂತ್ರಣಕ್ಕೆ ಪೋಟ್ಯಾಸಿಯಂ ಹಾಗೂ ಹಲವಾರು ಮುಖ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಈ ತರಬೇತಿ ಮಹಿಳೆಯರಲ್ಲಿ ಆರ್ಥಿಕ ಸ್ವಾಯತ್ತತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮಾತ್ರವಲ್ಲ, ಹಳ್ಳಿಗಳಲ್ಲಿ ಕೃಷಿ ಆಧಾರಿತ ಸಣ್ಣ ಕೈಗಾರಿಕೆಗಳನ್ನು ಬೆಳೆಸಲು ಸಹಾಯ ಮಾಡಲಿದೆ. ಆತ್ಮನಿರ್ಭರ ಮಹಿಳಾ ಸಮುದಾಯ ನಿರ್ಮಾಣಕ್ಕೆ ಇದು ಪ್ರಮುಖ ಹೆಜ್ಜೆಯಾಗಲಿದೆ ಎಂದು ತಿಳಿಸಿದರು. ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮವು ಮಹಿಳೆಯರ ಹಿತಾಸಕ್ತಿ ಮತ್ತು ಸ್ವಾವಲಂಬನೆಗೆ ಪೂಕರವಾದ ಮಾಹಿತಿಯನ್ನು ನೀಡುವುದರ ಮೂಲಕ ಪ್ರಭಾವಶೀಲವಾದ ಬೆಳವಣಿಗೆಗೆ ಕಾರಣವಾಯಿತು. ಅಣಬೆ ಉತ್ಪಾದನೆ ಹಾಗೂ ಸಂಸ್ಕರಣೆ ಕುರಿತು, ಹಾಗಲವಾಡಿಯ ನವ ಉದ್ಯಮಿಯಾಗಿ ಹೊರ ಹೊಮ್ಮುತ್ತಿರುವ ಗಂಗಲಕ್ಷ್ಮೀರವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಸುಮಾರು ೩೦ಕ್ಕೂ ಹೆಚ್ಚು ಮಹಿಳೆಯರು ಹಾಗೂ ಆಸಕ್ತ ರೈತರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.