ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಕಡ್ಡಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

KannadaprabhaNewsNetwork |  
Published : Jun 08, 2026, 01:30 AM IST
ಕೆ ಕೆ ಪಿ ಸುದ್ದಿ 03: ಸಿಎಂ ಪ್ರವಾಸದ ಸುದ್ದಿ.  | Kannada Prabha

ಸಾರಾಂಶ

ಕನಕಪುರ: ಕ್ಷೇತ್ರದ ಬಡವರಿಗೆ ತಲೆ ಮೇಲೆ ಸೂರು, ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕಡ್ಡಾಯ. ಮೆಡಿಕಲ್‌ ಕಾಲೇಜು ಶೀಘ್ರ ಪ್ರಾರಂಭ, ಸಮಸ್ಯೆಗಳನ್ನು ಆಲಿಸಲು ಅಧಿಕಾರಿ ನೇಮಕ - ಹೀಗೆ ಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ಸಿಎಂ ಡಿ.ಕೆ.ಶಿವಕುಮಾರ್ ನೀಡಿದರು

ಕನಕಪುರ: ಕ್ಷೇತ್ರದ ಬಡವರಿಗೆ ತಲೆ ಮೇಲೆ ಸೂರು, ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕಡ್ಡಾಯ. ಮೆಡಿಕಲ್‌ ಕಾಲೇಜು ಶೀಘ್ರ ಪ್ರಾರಂಭ, ಸಮಸ್ಯೆಗಳನ್ನು ಆಲಿಸಲು ಅಧಿಕಾರಿ ನೇಮಕ - ಹೀಗೆ ಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ಸಿಎಂ ಡಿ.ಕೆ.ಶಿವಕುಮಾರ್ ನೀಡಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭಾನುವಾರ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ನನ್ನ ಕ್ಷೇತ್ರದ ಜನರಿಗೆ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ನಾನು ನಿಮ್ಮ ಸೇವೆಗೆ ಇರುವವನು. ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದೇ‌‌ನೆ. ನನ್ನ ಕ್ಷೇತ್ರಕ್ಕೆ ಕಾಲಿಟ್ಟ ಕ್ಷಣದಿಂದ ನಾನು ಜನರ ಸೇವಕ. ಜಿಲ್ಲಾ ಪಂಚಾಯತಿ, ಟಿಎಪಿಸಿಎಂಎಸ್ ಮೂಲಕ ನನ್ನ ರಾಜಕೀಯ ಪ್ರಾರಂಭಿಸಿದೆ. ಪಕ್ಷಬೇಧ ಮರೆತು ನನ್ನನ್ನು ಬೆಳೆಸಿದ್ದೀರಿ ಎಂದರು.

ಮೆಡಿಕಲ್ ಕಾಲೇಜು ನನ್ನ ಕನಸು:

ತುಂಗಣಿ ಗ್ರಾಮದಲ್ಲಿ ಮಾತನಾಡಿದ ಅವರು, ಅಕ್ಷರ, ಆಶ್ರಯ, ಆರೋಗ್ಯ ಹುಡುಕಿಕೊಂಡು ವಲಸೆ ಹೋಗಬೇಡಿ. ಅದೆಲ್ಲವೂ ಇಲ್ಲಿಯೇ ದೊರೆಯಲಿದೆ. ಕನಕಪುರದಲ್ಲಿ ದೊಡ್ಡ ಮೆಡಿಕಲ್ ಕಾಲೇಜು ಆಗಬೇಕು ಎನ್ನುವುದು ನನ್ನ ಕನಸಾಗಿತ್ತು. ಇಡೀ ರಾಜ್ಯದಲ್ಲಿ ತಾಲೂಕು ಮಟ್ಟದಲ್ಲಿ ಮೆಡಿಕಲ್ ಕಾಲೇಜು ಇದ್ದರೆ ಅದು ಈ ಕ್ಷೇತ್ರದಲ್ಲಿ ಮಾತ್ರ. ಯಡಿಯೂರಪ್ಪ ಅವರು ನಮಗೆ ಘೋಷಣೆಯಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ನೀಡಿದ್ದರು. ನಾನು ಛಲಬಿಡದೇ ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದಿದ್ದೇನೆ ಎಂದರು.

‌ಕ್ಷೇತ್ರದಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು.‌ ನನ್ನ ಕ್ಷೇತ್ರದ ಜನ ವಲಸೆ ಹೋಗುವುದನ್ನು ತಪ್ಪಿಸಲು ಕೆಲಸ ಮಾಡಲಾಗುತ್ತಿದೆ. ದೊಡ್ಡಆಲಳ್ಳಿ, ಹೊಸದುರ್ಗಗಳಲ್ಲಿ ಸಿಎಸ್ ಆರ್ ಅನುದಾನ ಬಳಸಿ ಕೆಪಿಎಸ್ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಲ್ಲಿ ದೊರೆಯುವ ಶಿಕ್ಷಣ ಇಲ್ಲಿಯೇ ದೊರೆಯಬೇಕು. ನಿಮಗೆ ಆಶ್ರಯ, ಆರೋಗ್ಯ, ಅಕ್ಷರ ನೀಡುವುದು ನನ್ನ ಮೊದಲ ಆದ್ಯತೆ.‌ ಇದೇ ವೇಳೆ ಭೂಮಿ ಮಾರಬೇಡಿ- ವ್ಯವಸಾಯ ಬಿಡಬೇಡಿ ಎಂದು ಕಿವಿಮಾತು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಲಾಶಯ ಹಿನ್ನೀರಿನ ಗ್ರಾಮಗಳಿಗೆ ಆದ್ಯತೆ
ಕಾಡಲ್ಲಿ ರೌಡಿಪಾರ್ಟಿ, ತಲೆ ತಗ್ಗಿಸುವ ವಿಷಯ: ರೈತಸಂಘ