ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೊಸ ಫ್ಲಾಟ್-ಫ್ಲೋರ್ ಫ್ಯಾಕ್ಟರಿ ರಾಜ್ಯದ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಒಂದು ಮಹತ್ತರ ಹೆಜ್ಜೆ. ಇದು ಬಳಸಲು ಸಿದ್ಧವಾದ ಕಾರ್ಖಾನೆ ಸ್ಥಳಗಳನ್ನು ಸಂಪೂರ್ಣ ಸೌಲಭ್ಯಗಳೊಂದಿಗೆ ಉದ್ದಿಮೆದಾರರಿಗೆ ಒದಗಿಸುತ್ತದೆ. ಈ ಯೋಜನೆಯು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ ಕಲ್ಯಾಣ ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಮೊದಲ ಹೆಜ್ಜೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ವಿಧಿ ಜಾರಿ ದಶಮಾನೋತ್ಸವದಲ್ಲಿ ಪಾಲ್ಗೊಂಡು ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿದ್ದರಾಮಯ್ಯ, ಕಲಬುರಗಿಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ ವತಿಯಿಂದ ಅತ್ಯಾಧುನಿಕ ಇನ್ಕ್ಯುಬೇಶನ್ ಮತ್ತು ಕೌಶಲ್ಯ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಇದು ನುರಿತ ಪ್ರತಿಭಾವಂತ ಉದ್ಯೋಗಿಗಳನ್ನು ಸೃಷ್ಟಿಸಲಿದೆ. ಕೆ-ಟೆಕ್ ಮೂಲಕ ನವೋದ್ಯಮ ಪೋಷಿಸಲಾಗುತ್ತಿದೆ ಎಂದೂ ಸಿದ್ದರಾಮಯ್ಯ ಹೇಳಿದರು.
ಕೆಕೆಆರ್‌ಡಿಬಿ ಯೋಜನೆಗಳಿಗೆ ಶ್ಲಾಘನೆ:ಅಕ್ಷರ, ಆರೋಗ್ಯ, ಉದ್ಯೋಗ ಅವಿಷ್ಕಾರದಂತಹ ಸಮಗ್ರ ಪ್ರಗತಿಯ ದೃಷ್ಟಿಕೋನದ ಯೋಜನೆ ರೂಪಿಸಿರುವ ಕೆಕೆಆರ್‌ಡಿಬಿ ಕೆಲಸ ಕಾರ್ಯ ಶ್ಲಾಘಿಸಿದ ಮುಖ್ಯಮಂತ್ರಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2024- 25ನೇ ಸಾಲಿನ ಆಯವ್ಯಯದಲ್ಲಿ 5,000 ಕೋಟಿ ರು. ಅನುದಾನ ಹಂಚಿಕೆ ಮಾಡಿ ತಮ್ಮ ಸರ್ಕಾರ ಬದ್ಧತೆ ಮೆರೆದಿದೆ ಎಂದರು. ಈ ಮೊತ್ತಕ್ಕೆ ಸಲ್ಲಿಸಿದ ಕ್ರಿಯಾ ಯೋಜನೆಗೆ ಸರ್ಕಾರ ಈಗಾಗಲೆ ಅನುಮೋದನೆ ನೀಡಿದ್ದು, ಈ ಪ್ರದೇಶದಲ್ಲಿ ಅಭಿವೃದ್ಧಿ ಹೊಸ ಕ್ರಾಂತಿ ನಿರೀಕ್ಷಿಸೋಣವೆಂದು ಸಿದ್ದರಾಮಯ್ಯ ಹೇಳಿದರು.
ಹುತಾತ್ಮರ ಸ್ಮರಣೆ:1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಬೆಳಕು ಬಂದಿದ್ದು ಒಂದು ವರ್ಷದ ನಂತರ. ಈ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಅವಕಾಶ ಲಭಿಸಿದ್ದು ಈ ಭಾಗದ ಅಭಿವೃದ್ಧಿಯ ಸಂಕಲ್ಪವನ್ನು ಇನ್ನಷ್ಟು ಬಲಪಡಿಸಿದೆ ಎಂದರು. ಬೀದರ್‌ನ ಗೋರ್ಟಾ, ಯಾದಗಿರಿಯ ಸುರಪೂರ ದೊರೆಗಳ ಹೋರಾಟ, ಕಲಬುರಗಿಯಲ್ಲಿ ಸುತ್ತಮುತ್ತ ನಡೆದ ಹೋರಾಟಗಳನ್ನೆಲ್ಲ ಮೆಲಕು ಹಾಕಿದ ಸಿದ್ದರಾಮಯ್ಯ ಅನೇಕ ಹುತಾತ್ಮರ ತ್ಯಾಗ ಬಲಿದಾನ ಸ್ಮರಿಸಿದರು.
ಮೈಸೂರು ಮತ್ತು ಹೈದ್ರಾಬಾದ್ ಎರಡು ಪ್ರಾಂತ್ಯಗಳು ಭಾರತದಲ್ಲಿ ವಿಲೀನಗೊಳ್ಳಲು ನಿರಾಕರಿಸಿದ್ದವು, ಜನರ ಆಶೋತ್ತರಗಳಿಗೆ ಮಣಿದ ಮೈಸೂರು ರಾಜಪ್ರಭುತ್ವವು ಬಹುಬೇಗ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿತು. ಭಾರತದ ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ, ಕನ್ನಡ ಭಾಷಿಕರು ಒಗ್ಗೂಡುವ ಭಾಷಾವಾರು ಪ್ರಾಂತ್ಯ ರಚನೆ ಹೋರಾಟ ಮತ್ತು ಆರ್ಟಿಕಲ್ 371 ಜೆ ರಚನೆಗಾಗಿ ನಡೆದ ಚಳವಳಿಗಳನ್ನು ಕಲ್ಯಾಣದ ಹೊಸ ತಲೆಮಾರು ಎಂದಿಗೂ ಮರೆಯಬಾರದು ಎಂದು ಸಿದ್ಧರಾಮಯ್ಯ ಒತ್ತಿ ಹೇಳಿದರು.ಕಲಂ 371 ಜೆ ಪ್ರಸ್ತಾವನೆ ಬಿಜೆಪಿ ತಿರಸ್ಕರಿಸಿತ್ತುಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾವನೆ ತಿರಸ್ಕರಿಸಿತ್ತು. ಆದರೆ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಧರಂಸಿಂಗ್ ನಿರಂತರ ಪ್ರಯತ್ನದಿಂದ ಮುಂದೆ ಅಧಿಕಾರಕ್ಕೆ ಬಂದ ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಯುಪಿಎ ಸರ್ಕಾರ ಡಿಸೆಂಬರ್ 2012ರಲ್ಲಿ ಸಂವಿಧಾನದ ಕಲಂ 371ಕ್ಕೆ ತಿದ್ದುಪಡಿ ತಂದು 371 (ಜೆ) ಪರಿಚ್ಛೇದ ಸೇರ್ಪಡೆ ಮಾಡಲಾಯಿತು. ರಾಷ್ಟ್ರಪತಿ ಅಂಕಿತದೊಂದಿಗೆ ಇದು ದಿನಾಂಕ 1-1-2013ರಿಂದ ಜಾರಿಗೆ ಬಂದಿತು. ಇದರಿಂದಾಗಿ ಈ ಭಾಗದ ಜಿಲ್ಲೆಗಳಲ್ಲಿ ಪ್ರಗತಿ ಗಾಳಿ ಬೀಸತೊಡಗಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳಿಂದ ಜನ ಖುಷಿಯಲ್ಲಿ ಇದ್ದಾರೆ ಎಂದು ಯೋಜನೆಗಳವಾರು ಕಲ್ಯಾಣ ಭಾಗದಲ್ಲಿನ ಪ್ರಗತಿ ವಿವರಿಸಿದರು. ಪಂಚ ಗ್ಯಾರಂಟಿಯಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ 48 ರಿಂದ 60 ಸಾವಿರ ರು. ಸೌಲಭ್ಯ ಲಭಿಸಲಿದೆ. ಇದು ಸಂತೃಪ್ತಿ ಭಾವ ಮೂಡಿಸಿದೆ ಎಂದರು.ಕೆಕೆಆರ್‌ಡಿಬಿ ಅನುದಾನದಿಂದ ಮಲ್ಲಿಕಾರ್ಜುನ ಖರ್ಗೆ ಆಶಯದಂತೆ ಕಲಬುರಗಿಯನ್ನು ರಿಜಿನಲ್ ಹೆಲ್ತ್ ಹಬ್ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ. ದೂರದ ಬೆಂಗಳೂರು, ಮುಂಬೈ, ಹೈದರಾಬಾದ್‌ಗೆ ಹೋಗುವುದನ್ನು ತಪ್ಪಿಸಿ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡುವುದೆ ಗುರಿ ಎಂದರು.
ಕಲ್ಯಾಣದ ಜಿಲ್ಲೆಗಳ ಸರ್ವತೋಮುಖ ಪ್ರಗತಿಯಾಗದ ಹೊರತು ಕರ್ನಾಟಕದ ಪ್ರಗತಿ ಅಸಾಧ್ಯ, ಹೀಗಾಗಿ ಕಲ್ಯಾಣದ ಪ್ರಗತಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.ಸಿದ್ದರಾಮಯ್ಯ ಭಾಷಣದಲ್ಲಿ ಪ್ರಸ್ತಾಪವಾದ ಮಹತ್ವದ ಸಂಗತಿಗಳು
1) ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ತಾಲೂಕಿನ ನದಿಸಿನ್ನೂರ-ಹೊನ್ನಕಿರಣಗಿ ಬಳಿ 1,000 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ.2) ಬೀದರ್ ಹಾಗೂ ಬೆಂಗಳೂರು ನಡುವೆ ಆರ್ಥಿಕ ಕಾರಿಡಾರ್ ಅಭಿವೃದ್ಧಿ, ಕಲ್ಯಾಣ ಕರ್ನಾಟಕ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕ್ರಮ.
3) 20 ಕೋಟಿ ರು. ವೆಚ್ಚದಲ್ಲಿ ಕಲಬುರಗಿ ಸರ್ಕಾರಿ (ಪುರುಷರ) ಐಟಿಐ ತರಬೇತಿ ಸಂಸ್ಥೆ ಪುನಶ್ಚೇತನ.4) ರಾಜ್ಯ ಸರ್ಕಾರದಿಂದಲೆ 1,685 ಕೋಟಿ ರು. ಅಂದಾಜು ವೆಚ್ಚದಲ್ಲಿ ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲು ಚಿಂತನೆ.
5) ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ ಕಲಬುರಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ತಲಾ 200 ಕೋಟಿ ರು. ಅನುದಾನ.6) ಪೌರಾಣಿಕ ಪ್ರಖ್ಯಾತಿ ಹೊಂದಿರುವ ಕೊಪ್ಪಳದ ಅಂಜನಾದ್ರಿ ಬೆಟ್ಟ, ಸುತ್ತಮುತ್ತಲಿನ ಪ್ರವಾಸಿ ಸೌಲಭ್ಯ ಅಭಿವೃದ್ಧಿಗೆ 100 ಕೋಟಿ ರು. ಅನುದಾನ.
7) ಕಲ್ಯಾಣ ಕರ್ನಾಟಕ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಡಳಿತ ಸೌಧ ನಿರ್ಮಾಣ.8) ಬೀದರ್ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ, ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಸ್ಥಾಪನೆ.
9) ಕೇಂದ್ರ ಸರ್ಕಾರದ ‘ಪ್ರಸಾದ’ ಯೋಜನೆಯಡಿ ಕಲಬುರಗಿಯ ಸುಪ್ರಸಿದ್ದ ದೇವಲಗಾಣಗಾಪೂರ ಕ್ಷೇತ್ರ ಅಭಿವೃದ್ದಿ.