ಮಹಿಳಾ ಸಬಲೀಕರಣಕ್ಕೆ ಉದ್ಯೋಗ ಖಾತ್ರಿ ಬಲ

KannadaprabhaNewsNetwork |  
Published : Jun 27, 2024, 01:03 AM IST
ಪೊಟೋ- ಸಮೀಪದ ಯಳವತ್ತಿ ಗ್ರಾಮದಲ್ಲಿ ನರೇಗಾ ಕಾಮಗಾರಿಯಲ್ಲಿ ಮಹಿಳೆಯರು ಪಾಲ್ಗೊಳ್ಳವಿಕೆ ಉತ್ತೇಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಹಿಳಾ ಕಾರ್ಮಿಕರು. | Kannada Prabha

ಸಾರಾಂಶ

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಶೇಕಡಾ ೫೦.೧೫ಕ್ಕೆ ಹೆಚ್ಚಿಸುವಲ್ಲಿ ಲಕ್ಷ್ಮೇಶ್ವರ ತಾಲೂಕು ಪಂಚಾಯತಿ ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಶೇಕಡಾ ೫೦.೧೫ಕ್ಕೆ ಹೆಚ್ಚಿಸುವಲ್ಲಿ ಲಕ್ಷ್ಮೇಶ್ವರ ತಾಲೂಕು ಪಂಚಾಯತಿ ಯಶಸ್ವಿಯಾಗಿದೆ.

ಮಹಿಳೆಯರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಕೈಗೊಳ್ಳಲಾದ ವಿಶೇಷ ಮುತುವರ್ಜಿ ಮೆಚ್ಚುಗೆಗೆ ಪಾತ್ರವಾಗಿದೆ. ಖಾಸಗಿ ಕಾಮಗಾರಿ ಸೇರಿದಂತೆ ಇತರೆಡೆ ಮಹಿಳೆಯರು ದುಡಿದರೆ ನೀಡುವ ವೇತನದಲ್ಲಿ ತಾರತಮ್ಯವಿದೆ. ಪುರುಷರಿಗೆ ಕೊಡುವಷ್ಟು ಕೂಲಿ ಹಣವನ್ನು ಮಹಿಳಾ ಕಾರ್ಮಿಕರಿಗೆ ನೀಡುವುದಿಲ್ಲ. ಆದರೆ, ನರೇಗಾದಡಿ ಸಮಾನ ಕೂಲಿ ನಿಯಮವಿದೆ. ಹೀಗಿದ್ದರೂ ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆ. ಇದನ್ನು ಅರಿತ ತಾಪಂ ಇಒ ಕೃಷ್ಣಪ್ಪ ಧರ್ಮರ ಅವರು, ಮಹಿಳೆಯರಿಗೆ ಹೆಚ್ಚು ಹೆಚ್ಚು ಉದ್ಯೋಗ ಖಾತ್ರಿ ಕೆಲಸದಲ್ಲಿ ತೊಡಗಿಸಲು ಎಲ್ಲ ಪಿಡಿಒ ಮತ್ತು ಪಂಚಾಯತಿ ಸಿಬ್ಬಂದಿಗೆ ನಿರ್ದೇಶನ ನೀಡಿದ ಪರಿಣಾಮ ತಾಲೂಕಿನಲ್ಲಿ ಮಹಿಳಾ ಕೆಲಸಗಾರರ ಪ್ರಮಾಣ ಹೆಚ್ಚಿದೆ.

ನರೇಗಾ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಗ್ರಾಮಾಭಿವೃದ್ಧಿ ಹಾಗೂ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು ಯೋಜನೆಯ ಉದ್ದೇಶ. ಹೀಗಾಗಿ, ಪುರುಷ, ಮಹಿಳೆ ಎಂಬ ತಾರತಮ್ಯ ಇಲ್ಲದೆ ಪ್ರತಿ ಕುಟುಂಬ ೧೦೦ ದಿನ ಉದ್ಯೋಗ ಪಡೆಯಬಹುದಾಗಿದೆ. ಯೋಜನೆಯಡಿ ಒಂದು ದಿನದ ಕೂಲಿ ಹಣವಾಗಿ ₹೩೪೯ ನೀಡಲಾಗುತ್ತಿದೆ.

ಸಮಾನ ವೇತನ ನೀತಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಸಂದಾಯ ಇದ್ದರೂ ಯೋಜನೆಯ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು. ಪುರುಷರ ಕಾರ್ಮಿಕರಿಗೆ ಹೋಲಿಕೆ ಮಾಡಿದರೆ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ. ೪೬-೪೭ರಷ್ಟು ಮಾತ್ರ ಇತ್ತು. ಉದ್ಯೋಗ ಖಾತ್ರಿಯತ್ತ ಮಹಿಳೆಯರನ್ನು ಸೆಳೆಯುವ ತಾಪಂ ಉದ್ದೇಶ ಸಾಕಾರವಾಗಿದೆ.

ಸ್ವಸಹಾಯ ಗುಂಪುಗಳ ನೆರವು:

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಗಣಕಯಂತ್ರ ನಿರ್ವಾಹಕರು, ಗ್ರಾಮ ಕಾಯಕ ಮಿತ್ರರು ಒಟ್ಟುಗೂಡಿ ಗ್ರಾಮಗಳಲ್ಲಿಯ ಮಹಿಳಾ ಸ್ವಸಹಾಯ ಗುಂಪುಗಳ ಸಹಯೋಗದಲ್ಲಿ ಸಭೆ ಜರುಗಿಸಿ, ಉದ್ಯೋಗ ಖಾತ್ರಿಯ ಉದ್ದೇಶ ಮತ್ತು ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಆ ಮೂಲಕ ಸಮುದಾಯ ಕಾಮಗಾರಿಗಳತ್ತ ಮಹಿಳೆಯರನ್ನು ಸೆಳೆಯುವ ಕಾರ್ಯವನ್ನು ಆರಂಭಿಸಲಾಯಿತು. ಕೆಲವು ಗ್ರಾಮಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೆಲಸ ಹಂಚಿಕೆ ಮಾಡಿಕೊಡಲಾಗಿದೆ.

ತಾಲೂಕಿನ ಒಟ್ಟು ಮಹಿಳಾ ಪಾಲ್ಗೊಳ್ಳುವಿಕೆ ಪ್ರಮಾಣ ಶೇ. ೫೦.೧೫ರಷ್ಟಿದೆ. ಶಿಗ್ಲಿ ಗ್ರಾಪಂ ಶೇ. ೫೫.೯೯, ಆದರಹಳ್ಳಿ ಶೇ. ೫೪.೭೪, ಯಳವತ್ತಿ ಶೇ. ೫೩.೭೬, ಬಾಲೆಹೊಸೂರ ಶೇ. ೫೦.೯೫, ಗೋವನಾಳ ಗ್ರಾಪಂ ಶೇ. ೫೦.೦೪ ರಷ್ಟು ಮಹಿಳಾ ಪಾಲ್ಗೊಳ್ಳುವಿಕೆ ಇದ್ದು, ಮಾಢಳ್ಳಿ ಗ್ರಾಪಂ ಶೇ.೪೩ರಷ್ಟಿದೆ. ಇನ್ನುಳಿದ ಪಂಚಾಯಿತಿ ಶೇ. ೫೦ಕ್ಕೆ ಸಮೀಪದಲ್ಲಿವೆ.ಸಮಾನ ವೇತನ

ಖಾಸಗಿ ಕಾಮಗಾರಿಗಳಲ್ಲಿ ದುಡಿಯುವ ಮಹಿಳೆಯರಿಗೆ ಈ ಭಾಗದಲ್ಲಿ ಪುರುಷರಿಗೆ ನೀಡುವಷ್ಟು ಕೂಲಿ ನೀಡಲಾಗುವುದಿಲ್ಲ. ಆದರೆ, ನರೇಗಾದಡಿ ದುಡಿದರೆ ಸಮಾನ ವೇತನ ಸಿಗಲಿದೆ. ಆದರೂ ಹೆಚ್ಚು ಮಹಿಳೆಯರು ನರೇಗಾದಡಿ ದುಡಿಯಲು ಮುಂದೆ ಬರುತ್ತಿರಲಿಲ್ಲ. ಹಾಗಾಗಿ ಅವರಲ್ಲಿ ಯೋಜನೆ ಬಗ್ಗೆ ಅರಿವು ಮೂಡಿಸಿ, ಇತ್ತ ಸೆಳೆಯಲು ಯಶಸ್ವಿಯಾಗಿದ್ದೇವೆ. ವೈಯಕ್ತಿಕ ಕಾಮಗಾರಿಗಳಲ್ಲಿ ಹೆಚ್ಚು ಮಹಿಳೆಯರನ್ನು ತೊಡಗಿಸಲು ಕ್ರಮಕೈಗೊಳ್ಳಲಾಗುವುದು.

ಕೃಷ್ಣಪ್ಪ ಧರ್ಮರ, ತಾಪಂ ಇಒ

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ