ಗದಗ:ತಾಲೂಕಿನ ಬಹುಪಾಲು ರೈತರ ಜಮೀನುಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಂದಕ ಬದು ನಿರ್ಮಾಣ ಮಾಡಲಾಗುತ್ತಿದೆ. ಇತ್ತೀಚೆಗೆ ಕೆಲವು ಗ್ರಾಮಗಳಲ್ಲಿ ಸುರಿದ ಮಳೆಗೆ ಕಂದಕಗಳು ನೀರು ತುಂಬಿಕೊಂಡಿರುವುದು ಯೋಜನೆಗೆ ಶ್ರಮಿಸಿದ ರೈತರ ಮೊಗದಲ್ಲಿ ಸಂತಸ ಚಿಮ್ಮುವಂತೆ ಮಾಡಿದೆ.ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರ ಅಭಿವೃದ್ಧಿಗೆ ಇರುವ ಪ್ರಮುಖ ಯೋಜನೆ ಆಗಿದೆ. ಇದು ರೈತರಿಗೆ ವರದಾನವಾಗಿರುವುದರ ಜೊತೆಗೆ ಜಮೀನಿನ ಫಲವತ್ತತೆ ಹೆಚ್ಚಳಕ್ಕೆ ಪೂರಕವಾಗಿದೆ. ಇದರಲ್ಲಿ ಗ್ರಾಮೀಣರು ವೈಯಕ್ತಿಕ ಕಾಮಗಾರಿಗಳ ಮೂಲಕ ತಮ್ಮ ಜಮೀನಿನಲ್ಲಿ ವಿವಿಧ ಅರಣ್ಯ, ತೋಟಗಾರಿಕೆ, ರೇಷ್ಮೆ ಬೆಳೆ ಬೆಳೆಯ ಬಹುದು. ಇಲ್ಲವೇ ಸಮುದಾಯ ಕಾಮಗಾರಿಯಲ್ಲಿ ಪಾಲ್ಗೊಂಡು ದಿನಕ್ಕೆ 370 ರು. ಕೂಲಿ ಪಡೆಯಬಹುದಾಗಿದೆ.ಗದಗ ತಾಲೂಕು ಪಂಚಾಯತಿ ವ್ಯಾಪ್ತಿಯ ಅಡವಿಸೋಮಾಪುರ, ಬಿಂಕದಕಟ್ಟಿ, ಕುರ್ತಕೋಟಿ, ಲಕ್ಕುಂಡಿ, ಬೆಳಹೋಡ, ಅಂತೂರ, ಬಳಗಾನೂರ, ಹರ್ಲಾಪೂರ, ತಿಮ್ಮಾಪುರ, ಹುಯಿಲಗೋಳ, ಹುಲಕೋಟಿ, ಕದಡಿ, ನಾಗಾವಿ, ಬೆಳದಡಿ ಸೇರಿ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸಮುದಾಯ ಬದು ನಿರ್ಮಾಣ ಕಾಮಗಾರಿಗಳು ಪ್ರಾರಂಭವಾಗಿದ್ದು. ನಿತ್ಯ 10,000 ಕ್ಕೂ ಹೆಚ್ಚು ಜನರು ಕೆಲಸದಲ್ಲಿ ತೊಡಗಿದ್ದಾರೆ. 2 ಬಾರಿ ಹಾಜರಾತಿ ಕಡ್ಡಾಯ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೆಲಸಕ್ಕೆ ಬರುವ ಕೂಲಿಕಾರರ ಹಾಜರಾತಿ ಪಡೆಯಲು ಕೇಂದ್ರ ಸರ್ಕಾರ ಎನ್‌ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸರ್ವಿಸ್) ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ದಿನಕ್ಕೆ ಎರಡು ಬಾರಿ ಹಾಜರಾತಿ ಹಾಕುವುದು ಕಡ್ಡಾಯವಿದೆ.ಸಮಾನ ಕೂಲಿ:ಎನ್‌ಆರ್‌ಇಜಿಎ ಯೋಜನೆಯಡಿ ಮಹಿಳೆ, ಪುರುಷ ಎಂಬ ಭೇದವಿಲ್ಲದೆ ಎಲ್ಲರಿಗೂ ಕೂಲಿ ಹಣ ನೀಡಲಾಗುತ್ತದೆ. 349 ರು. ಇದ್ದ ಕೂಲಿ ದರವನ್ನು ಏ.1 ರಿಂದ 370 ರು.ಗೆ ಹೆಚ್ಚಿಸಲಾಗಿದೆ. ಸರಿಯಾದ ಅಳತೆಯಲ್ಲಿ ಕಂದಕ ಬದು ನಿರ್ಮಾಣ ಮಾಡಿದಾಗ ಮಾತ್ರ ಪೂರ್ಣ ಪ್ರಮಾಣದ ಕೂಲಿ ಹಣ ದೊರೆಯಲಿದೆ. ತಾಲೂಕಿನ ಗ್ರಾಮೀಣ ಜನರು ಬೇಸಿಗೆಯ ಕನಿಷ್ಠ 50 ದಿನಗಳ ಕಾಲ ಕೆಲಸ ನಿರ್ವಹಿಸಿದರೆ 18500 ರು.ಗಳನ್ನು ನೇರವಾಗಿ ಕೂಲಿಕಾರರ ಉಳಿತಾಯ ಖಾತೆಗೆ ಪಾವತಿಯಾಗಲಿದೆ.