ಉದ್ಯೋಗ ಖಾತ್ರಿ: ಕಾರ್ಮಿಕರಿಗೆ ಇನ್ನೂ ಸಿಗದ ಕೂಲಿ!

KannadaprabhaNewsNetwork | Published : Apr 2, 2024 1:00 AM

ಸಾರಾಂಶ

ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದುಡಿದ ಕಾರ್ಮಿಕರ ಮಾನವ ದಿನಗಳಿಗೆ ತಕ್ಕಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಯೋಜನೆ ಎಂಜಿನಿಯರ್‌ ಹಾಗೂ ತಾಲೂಕು ಪಂಚಾಯಿತಿ ಇಒ ಅವರ ಬಯೋಮೆಟ್ರಿಕ್‌ ನೀಡಿದ ಆಧಾರದಲ್ಲಿ ವೇತನ ಬಿಡುಗಡೆಯಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಗ್ರಾ.ಪಂ. ಮಟ್ಟದಲ್ಲೇ ಈ ಪ್ರಕ್ರಿಯೆ ವಿಳಂಬ ಆಗುವುದುಂಟು.

ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆಳುವ ಸರ್ಕಾರಗಳ ನಿಷ್ಕಾಳಜಿ ಹಾಗೂ ವಿಳಂಬ ಧೋರಣೆ ಫಲವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಫಲಾನುಭವಿಗಳಿಗೆ ಕಳೆದ ಎರಡು ತಿಂಗಳಿನಿಂದ ವೇತನ ಕೈ ಸೇರಿಲ್ಲ.

ಬರಗಾಲದಲ್ಲಿ ಕೆಲಸ ಇಲ್ಲದೇ ಪರಿತಪಿಸುತ್ತಿದ್ದ ಮಂದಿಗೆ ನರೇಗಾ ಯೋಜನೆ ವರವಾಗಿದೆ. ಸರ್ಕಾರದ ಈ ಯೋಜನೆ ಕೂಲಿ ಕಾರ್ಮಿಕ ವರ್ಗದ ಕೈ ಹಿಡಿದಿದೆ. ಆದರೆ, ಎರಡು ತಿಂಗಳಿಂದಲೂ ವೇತನ ಬಿಡುಗಡೆಯಾಗಿಲ್ಲ. ಹೀಗಾಗಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದುಡಿದ ಕಾರ್ಮಿಕರ ಮಾನವ ದಿನಗಳಿಗೆ ತಕ್ಕಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಯೋಜನೆ ಎಂಜಿನಿಯರ್‌ ಹಾಗೂ ತಾಲೂಕು ಪಂಚಾಯಿತಿ ಇಒ ಅವರ ಬಯೋಮೆಟ್ರಿಕ್‌ ನೀಡಿದ ಆಧಾರದಲ್ಲಿ ವೇತನ ಬಿಡುಗಡೆಯಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಗ್ರಾ.ಪಂ. ಮಟ್ಟದಲ್ಲೇ ಈ ಪ್ರಕ್ರಿಯೆ ವಿಳಂಬ ಆಗುವುದುಂಟು. ಹೀಗೆ ಸಹಿ ಸಹಿತ ಬಯೋಮೆಟ್ರಿಕ್‌ ನೀಡುವುದು ತಡವಾದರೂ ವೇತನ ಬಿಡುಗಡೆ ಕುಂಠಿತವಾಗುತ್ತದೆ. ಆದರೆ, ಈ ಬಾರಿ ಗ್ರಾ.ಪಂ.ಮಟ್ಟದಲ್ಲೇನು ಸಮಸ್ಯೆ ಆಗಿಲ್ಲ. ಬದಲಿಗೆ ಸರ್ಕಾರದ ಮಟ್ಟದಲ್ಲೇ ಸಮಸ್ಯೆ ತಲೆದೋರಿದೆ.

ನರೇಗಾ ಅನುದಾನದಲ್ಲಿ ಶೇ.90ರಷ್ಟು ಕೇಂದ್ರ ಹಾಗೂ ಶೇ.10ರಷ್ಟು ರಾಜ್ಯದ ಪಾಲಿದೆ. ಕೇಂದ್ರದ ಪಾಲು ಇನ್ನೂ ಬಾರದಿರುವುದೇ ಕೂಲಿ ಹಣ ಜಮೆಗೆ ಅಡ್ಡಿಯಾಗಿದೆ.

₹9.23 ಕೋಟಿ ಕೂಲಿ ಪಾವತಿ ಬಾಕಿ:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಲ್ಲಿ 7 ತಾಲೂಕುಗಳ ವ್ಯಾಪ್ತಿಯ ಕಾರ್ಮಿಕರಿಗೆ ₹ 9.23 ಕೋಟಿಯಷ್ಟು ಕೂಲಿ ಪಾವತಿಗೆ ಬಾಕಿ ಇದೆ. ಫೆಬ್ರವರಿ ನಂತರ ಕೂಲಿ ಹಣ ಪಾವತಿ ಆಗಿಲ್ಲ.

ಭದ್ರಾವತಿ ತಾಲೂಕಿನಲ್ಲಿ 1.42 ಕೋಟಿ, ಹೊಸನಗರದಲ್ಲಿ 54.23 ಲಕ್ಷ, ಸಾಗರದಲ್ಲಿ 1.66ಕೋಟಿ, ಶಿಕಾರಿಪುರದಲ್ಲಿ 2.1 ಕೋಟಿ, ಶಿವಮೊಗ್ಗದಲ್ಲಿ 1.33 ಕೋಟಿ, ಸೊರಬದಲ್ಲಿ 1.83 ಕೋಟಿ, ತೀರ್ಥಹಳ್ಳಿಯಲ್ಲಿ 42.92 ಲಕ್ಷ ಹಣ ಪಾವತಿಗೆ ಬಾಕಿ ಇದೆ. ಕೇಂದ್ರ ಸರ್ಕಾರದಿಂದ ಅನುದಾನ ಬಾರದೇ ಇರುವುದರಿಂದ, ಕೂಲಿ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.

-------------

32 ಲಕ್ಷ ಮಾನವ ದಿನದ ಗುರಿ

ಜಿಲ್ಲೆಯಲ್ಲಿ ವರ್ಷಕ್ಕೆ 32 ಲಕ್ಷ ಮಾನವ ದಿನಗಳ ಗುರಿ ಹೊಂದಿದ್ದು, ಈವರೆಗೆ ( ಏಪ್ರಿಲ್‌ 1, 2024ರವರೆಗೆ) 27,60,984 ಗುರಿ ಸಾಧಿಸಲಾಗಿದೆ. ಶೇ.86.28 ಪ್ರಗತಿ ಸಾಧಿಸಲಾಗಿದೆ. ಕೊರೋನಾ ಬಳಿಕವಂತೂ ಅನೇಕರು ನರೇಗಾವನ್ನೇ ನೆಚ್ಚಿಕೊಂಡಿದ್ದಾರೆ. ಸರ್ಕಾರ ಕೂಡ ನರೇಗಾಗೆ ಉತ್ತೇಜನ ನೀಡಿ, ದುಡಿಮೆಗೆ ಅವಕಾಶ ತೆರೆದಿಟ್ಟು ಭರವಸೆ ಮೂಡಿಸಿತ್ತು. ಆದರೆ, ಇದೀಗ ಕೇಂದ್ರದ ಅನುದಾನದ ಸಮಸ್ಯೆ ಉದ್ಯೋಗ ಖಾತ್ರಿ ಹುಸಿಯಾಗಿಸಿದೆ.ಸರ್ಕಾರದ ಮಟ್ಟದಲ್ಲಿ ಆಗಿರುವ ತಾಂತ್ರಿಕ ಸಮಸ್ಯೆಯಿಂದಾಗಿ ವೇತನ ಬಿಡುಗಡೆ ವಿಳಂಬ ಆಗಿರಬಹುದು. ಈ ಸಮಸ್ಯೆ ಕೇವಲ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ್ದಲ್ಲ. ರಾಜ್ಯದೆಲ್ಲೆಡೆ ಇದು ತಲೆದೋರಿದೆ. ಶೀಘ್ರದಲ್ಲೇ ಅನುದಾನ ಬರುವ ನಿರೀಕ್ಷೆ ಇದೆ. ಬಂದ ಕೂಡಲೇ ಬಾಕಿ ಹಣ ಪಾವತಿ ಮಾಡಲಾಗುವುದು.

-ಸ್ನೇಹಲ್‌ ಸುಧಾಕರ್‌ ಲೋಖಂಡೆ, ಸಿಇಒ, ಜಿಲ್ಲಾ ಪಂಚಾಯಿತಿ, ಶಿವಮೊಗ್ಗ.

--------------

Share this article