ಜಿಲ್ಲೆಯ 5000 ಯುವಕರಿಗೆ ದೊಡ್ಡ ಕಂಪನಿಗಳಲ್ಲಿ ಉದ್ಯೋಗ

KannadaprabhaNewsNetwork | Published : Nov 22, 2024 1:17 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ 5000 ಯುವಕರಿಗೆ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಯೋಜನೆ ರೂಪಿಸಿದ್ದೇನೆ. ಟೊಯೋಟಾ ಕಂಪನಿ‌ ಈಗಾಗಲೇ ವಿಜಯಪುರದಲ್ಲಿ ಎರಡು ದಿನಗಳ ಉದ್ಯೋಗ ಮೇಳ ನಡೆಸಿದ್ದು, ನೂರಾರು ಯುವಕರು ಉದ್ಯೋಗ ಪಡೆಯಲಿದ್ದಾರೆ. ಇನ್ನೂ, ಹೆಸರಾಂತ ಕಂಪನಿಗಳ ಮೂಲಕ ಉದ್ಯೋಗ ಮೇಳ ಆಯೋಜಿಸಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ 5000 ಯುವಕರಿಗೆ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಯೋಜನೆ ರೂಪಿಸಿದ್ದೇನೆ. ಟೊಯೋಟಾ ಕಂಪನಿ‌ ಈಗಾಗಲೇ ವಿಜಯಪುರದಲ್ಲಿ ಎರಡು ದಿನಗಳ ಉದ್ಯೋಗ ಮೇಳ ನಡೆಸಿದ್ದು, ನೂರಾರು ಯುವಕರು ಉದ್ಯೋಗ ಪಡೆಯಲಿದ್ದಾರೆ. ಇನ್ನೂ, ಹೆಸರಾಂತ ಕಂಪನಿಗಳ ಮೂಲಕ ಉದ್ಯೋಗ ಮೇಳ ಆಯೋಜಿಸಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬಬಲೇಶ್ವರದಲ್ಲಿ ಗ್ರಾಮಾಂತರ ವಿದ್ಯಾವರ್ಧಕ ಸಂಘದ ವಜ್ರಮಹೋತ್ಸವ, ಶ್ರೀ ಶಾಂತವೀರ ಮಹಾಸ್ವಾಮಿಗಳ ಪುಣ್ಯಾರಾಧನೆ ಹಾಗೂ ಗೆಳೆಯರ ಬಳಗದ ಸ್ಮಾರಕ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಡಿಗೆ ಮಠಮಾನ್ಯಗಳು, ಶಿಕ್ಷಣ ಸಂಸ್ಥೆಗಳು ಅಪಾರ ಕೊಡುಗೆ ನೀಡಿವೆ. ಇಲ್ಲದಿದ್ದರೆ ಈ ಭಾಗ ಹಿಂದುಳಿಯುತ್ತಿತ್ತು. ದಿ.‌ಬಿ.ಎಂ.ಪಾಟೀಲರು ಪೌರಾಡಳಿತ ಸಚಿವರಾಗಿದ್ದಾಗ ಈ ಸಂಘಕ್ಕೆ 10 ಎಕರೆ ಭೂಮಿ ನೀಡಿದ್ದಾರೆ. ನಾನೂ ಕೂಡ ಸಂಸ್ಥೆಗೆ ಒಂದು ಕೋಟಿ ರೂಪಾಯಿ ಅನುದಾನ ಕೊಡಿಸುವೆ. ನೀರಾವರಿ ಯೋಜನೆಗಳಿಂದಾಗಿ ವಿಜಯಪುರ ಜಿಲ್ಲೆಗೆ ಅಂಟಿದ್ದ ಬರಪೀಡಿತ ಜಿಲ್ಲೆ ಹಣೆಪಟ್ಟಿ ತೊಲಗಿದೆ. ಕೆರೆ, ಹಳ್ಳಗಳಿಗೆ ನೀರು ಹರಿಸಿ ಉಪಕಾರ ತೀರಿಸುವ ಕೆಲಸ ಮಾಡಿದ್ದೇನೆ. ಚಡಚಣ, ಹೊರ್ತಿ ಇನ್ನು ಒಂದು ತಿಂಗಳಲ್ಲಿ ತಿಡಗುಂದಿ ಅಕ್ವಾಡಕ್ಟ್ ಮೂಲಕ ನೀರು ಒದಗಿಸಲಾಗುವುದು. ಇದರಿಂದ ಶೇ.‌80 ರಷ್ಟು ನೀರಾವರಿಯಾಗಲಿದೆ ಎಂದು ಅವರು ಹೇಳಿದರು.ತುಮಕೂರು ಸಿದ್ದಗಂಗಾ ಮಹಾಸಂಸ್ಥಾನಮಠದ ಪೀಠಾಧಿಪತಿ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ರಾಜ್ಯದಲ್ಲಿ ಮಠಗಳು ನೀಡುತ್ತಿರುವ ದಾಸೋಹ ಮತ್ತು ಶಿಕ್ಷಣದಿಂದಾಗಿ‌ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಠಗಳ ಕೊಡುಗೆ ಅಪಾರವಾಗಿದೆ. ಸ್ವಾಮೀಜಿಗಳು‌ ಲಿಂಗಪೂಜೆ ನಿಷ್ಠರಾಗಿ ಜಂಗಮ ಪ್ರೇಮಿಯಾಗಿ ಸಮಾಜಸೇವೆ ಮಾಡುತ್ತಿದ್ದಾರೆ ಎಂದರು.ಎಂ.ಬಿ.ಪಾಟೀಲ ಸಿಎಂ ಆಗಲಿ

ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠ, ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಸಚಿವ ಎಂ.ಬಿ.ಪಾಟೀಲರು ನಮ್ಮ ಜಿಲ್ಲೆಯನ್ನು ದೇಶದ ಕ್ಯಾಲಿಫೋರ್ನಿಯಾ ಆಗುವಂತೆ ಅಭಿವೃದ್ಧಿ ಮಾಡಿದ್ದಾರೆ. ಅವರು ಬೇಗ ಸಿಎಂ‌ ಆಗುವ ಅವಕಾಶ ಪ್ರಾಪ್ತವಾಗಲಿ ಎಂದು ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಪಡಸಲಗಿ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಗುಣದಾಳ ವಿವೇಕಾನಂದ ದೇವರು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಆರ್‌.ಆರ್‌.ಹಂಚಿನಾಳ, ಬಾಲವಿಕಾಸ ಅಕಾಡೆಮಿ‌ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ವಿ.ಎನ್.ಬಿರಾದಾರ, ಎಂ.ಬಿ.ರೆಬಿನಾಳ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೋಟ್‌

ನೀರಾವರಿ ಯೋಜನೆಗಳಿಂದಾಗಿ ವಿಜಯಪುರ ಜಿಲ್ಲೆಗೆ ಅಂಟಿದ್ದ ಬರಪೀಡಿತ ಜಿಲ್ಲೆ ಹಣೆಪಟ್ಟಿ ತೊಲಗಿದೆ. ಕೆರೆ, ಹಳ್ಳಗಳಿಗೆ ನೀರು ಹರಿಸಿ ಉಪಕಾರ ತೀರಿಸುವ ಕೆಲಸ ಮಾಡಿದ್ದೇನೆ. ಚಡಚಣ, ಹೊರ್ತಿ ಇನ್ನು ಒಂದು ತಿಂಗಳಲ್ಲಿ ತಿಡಗುಂದಿ ಅಕ್ವಾಡಕ್ಟ್ ಮೂಲಕ ನೀರು ಒದಗಿಸಲಾಗುವುದು. ಇದರಿಂದ ಶೇ.‌80 ರಷ್ಟು ನೀರಾವರಿಯಾಗಲಿದೆ.

ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ

Share this article