ದೇಶದ ಆರ್ಥಿಕ ಪ್ರಗತಿಗೆ ಸಹಕಾರಿ ಕ್ಷೇತ್ರ ಅವಶ್ಯಕ

KannadaprabhaNewsNetwork | Published : Nov 22, 2024 1:17 AM

ಸಾರಾಂಶ

ಹಿರಿಯೂರು: ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ದ್ಯಾಮಣ್ಣ ಹೇಳಿದರು.

ಹಿರಿಯೂರು: ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ದ್ಯಾಮಣ್ಣ ಹೇಳಿದರು.

ತಾಲೂಕಿನ ಆರನಕಟ್ಟೆ ಗ್ರಾಮದ ಸಹಕಾರಿ ಸಂಘದ ಆವರಣದಲ್ಲಿ ಸಹಕಾರಿ ಸಪ್ತಾಹದ ಅಂಗವಾಗಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ತಾಲೂಕಿನ ಎಲ್ಲಾ ಸಹಕಾರ ಸಂಘಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಸಹಕಾರ ಸಪ್ತಾಹದಲ್ಲಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರಕ್ಕೆ ಸುಮಾರು 120 ವರ್ಷಗಳ ಇತಿಹಾಸವಿದ್ದು, ಸಹಕಾರಿ ಕ್ಷೇತ್ರವು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದ್ದು, ಆರ್ಥಿಕವಾಗಿ ಸದೃಢವಾಗಲು ಸಹಕಾರಿಯಾಗಿದೆ. ಮಾಜಿ ಪ್ರಧಾನಿ ನೆಹರೂರವರ ದೂರದೃಷ್ಟಿಯ ಫಲವಾಗಿ ಇಂದು ಈ ದೇಶದಲ್ಲಿ 3 ಕೋಟಿಗೂ ಹೆಚ್ಚು ಜನ ಸಹಕಾರಿ ಕ್ಷೇತ್ರದಲ್ಲಿ ಉದ್ಯೋಗ ಪಡೆದಿದ್ದಾರೆ ಎಂದರು.

ಪ್ರಾಧ್ಯಾಪಕ ಡಾ.ಡಿ.ಧರಣೇoದ್ರಯ್ಯ ಮಾತನಾಡಿ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಪಕ್ಷಪಾತ ರಹಿತ ಆಡಳಿತವಿದ್ದರೆ ಸಹಕಾರ ಸಂಸ್ಥೆಗಳು ಸಂಕಷ್ಟದಿಂದ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಸಂಜೀವಮೂರ್ತಿ ಮಾತನಾಡಿ, ಪ್ರಸ್ತುತ ಕೇಂದ್ರ ಸರ್ಕಾರ ಕೇಂದ್ರದಲ್ಲಿ ಪ್ರತ್ಯೇಕ ಸಹಕಾರಿ ಸಚಿವಾಲಯ ಆರಂಭಿಸಿ ಅದಕ್ಕೆ ಸೂಕ್ತ ಸಚಿವರನ್ನು ನೇಮಕ ಮಾಡುವ ಮೂಲಕ ಈ ದೇಶದ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇದರ ಉಪಯೋಗವನ್ನು ಸಹಕಾರ ಸಂಘಗಳು ಪಡೆದುಕೊಳ್ಳಬೇಕು ಎಂದರು.

ನಮ್ಮ ಜಿಲ್ಲೆಯ ಎಲ್ಲಾ ಹಾಲಿನ ಸಹಕಾರ ಸಂಘಗಳು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮೂಲಕವೇ ವಹಿವಾಟು ನಡೆಸಬೇಕು. ಜಿಲ್ಲಾ ಸಹಕಾರ ಬ್ಯಾಂಕ್ ಹೈನುಗಾರಿಕೆಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಕೃಷಿಕರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಆರನಕಟ್ಟೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಈ.ಮಹೇಶ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಮಾಳಿಗೆ, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಪ್ರತಾಪ್ ಸಿಂಹ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷೆ ಕೀರ್ತಿ ಕುಮಾರಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಜೆ.ಹನುಮಂತರಾಯ, ತಾಲೂಕು ಸಹಕಾರಿ ನೌಕರರ ಒಕ್ಕೂಟದ ಕಾರ್ಯದರ್ಶಿ ರಂಗಸ್ವಾಮಿ, ಜಗದೀಶ್, ಪ್ರಸನ್ನ ಕುಮಾರ್, ರಂಗಸ್ವಾಮಿ, ಹೊನ್ನಪ್ಪ, ಶಶಿಧರ್, ಹನುಮಂತರಾಯ, ಕರಿಯಪ್ಪ ಮುಂತಾದವರು ಉಪಸ್ಥಿತರಿದ್ದರು.

Share this article