ಸ್ವಗ್ರಾಮದಲ್ಲೇ ಉದ್ಯೋಗ, ವಲಸೆಗೆ ಬೀಳಲಿದೆ ಬೀಗ

KannadaprabhaNewsNetwork |  
Published : Aug 27, 2026, 03:30 AM IST
ಜಮಖಂಡಿ ಕುಂದಾಪುರದ ಕನ್ನಡಪ್ರಭ ವರದಿಗಾರ ಶ್ರೀಕಾಂತ ಹೆಮ್ಮಾಡಿ ಮೇಲೆ ಹಲ್ಲೆ ಪ್ರಕರಣನ್ನು ಖಂಡಿಸಿ ಕರ್ನಾಟಕ ಪ್ರೆಸ್‌ ಕ್ಲಬ್‌ನ ಪದಾಧಿಕಾರಿಗಳು ತಹಸೀಲ್ದಾರ ಅನೀಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಗ್ರಾಮೀಣ ಜನರಿಗೆ ಸ್ವಗ್ರಾಮದಲ್ಲೇ ಉದ್ಯೋಗಾವಕಾಶ ಕಲ್ಪಿಸಿ, ಆರ್ಥಿಕ ಹಾಗೂ ಜೀವನೋಪಾಯ ಭದ್ರತೆ ಒದಗಿಸುವ ಉದ್ದೇಶದಿಂದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್‌ ಅಜೀವಿಕ ಮಿಷನ್ (ಗ್ರಾಮೀಣ-ವಿಬಿಜಿ ರಾಮ್ ಜಿ) ಯೋಜನೆಯಡಿ ಹುಕ್ಕೇರಿ ತಾಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ವಿಶೇಷ ಜಾಗೃತಿ ಅಭಿಯಾನ ಹಾಗೂ ಜಾಬ್‌ಕಾರ್ಡ್ ಮೇಳ ಆರಂಭವಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಗ್ರಾಮೀಣ ಜನರಿಗೆ ಸ್ವಗ್ರಾಮದಲ್ಲೇ ಉದ್ಯೋಗಾವಕಾಶ ಕಲ್ಪಿಸಿ, ಆರ್ಥಿಕ ಹಾಗೂ ಜೀವನೋಪಾಯ ಭದ್ರತೆ ಒದಗಿಸುವ ಉದ್ದೇಶದಿಂದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್‌ ಅಜೀವಿಕ ಮಿಷನ್ (ಗ್ರಾಮೀಣ-ವಿಬಿಜಿ ರಾಮ್ ಜಿ) ಯೋಜನೆಯಡಿ ಹುಕ್ಕೇರಿ ತಾಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ವಿಶೇಷ ಜಾಗೃತಿ ಅಭಿಯಾನ ಹಾಗೂ ಜಾಬ್‌ಕಾರ್ಡ್ ಮೇಳ ಆರಂಭವಾಗಿದೆ.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಆ.15 ರಿಂದಲೇ ಆರಂಭವಾದ ಈ ಮೇಳ ಸೆ.15 ರವರೆಗೆ ನಡೆಯಲಿದೆ. ಗ್ರಾಮಸ್ಥರಿಗೆ ಯೋಜನೆಯಡಿ ದೊರೆಯುವ ಉದ್ಯೋಗಾವಕಾಶಗಳು ಹಾಗೂ ವೈಯಕ್ತಿಕ ಸವಲತ್ತುಗಳ ಕುರಿತು ಸಿಬ್ಬಂದಿಯಿಂದ ಮಾಹಿತಿ ನೀಡಲಾಗುತ್ತಿದೆ. ಇದರೊಂದಿಗೆ ಯೋಜನೆಯನ್ನು ಮತ್ತಷ್ಟು ಬಲಪಡಿಸಲು ಈ ವಿಶೇಷ ಅಭಿಯಾನ ಆಯೋಜಿಸಲಾಗಿದೆ. ಗ್ರಾಮೀಣ ಅಕುಶಲ ಕೂಲಿಕಾರರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 126.55 ಲಕ್ಷ ಮಾನವ ದಿನಗಳ ಗುರಿ ನಿಗದಿಯಾಗಿದೆ. ಈ ಪೈಕಿ ಪ್ರತಿದಿನ ಸರಾಸರಿ 75 ಸಾವಿರಕ್ಕೂ ಹೆಚ್ಚು ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಕಾಯಕ ಮಿತ್ರರು, ಬಿಎಫ್‌ಟಿ ಹಾಗೂ ಇತರ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ನಿಷ್ಕ್ರೀಯ ಕಾರ್ಡ್‌ಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಅರ್ಹರ ಕಾರ್ಡ್ ಸಕ್ರೀಯಗೊಳಿಸುವ ಜೊತೆಗೆ ಹೊಸ ಕೂಲಿಕಾರರನ್ನು ನೊಂದಾಯಿಸಲಾಗುತ್ತಿದೆ.ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾದರೆ ಕೂಲಿ ಕೆಲಸಕ್ಕೆ ನಗರ ಪ್ರದೇಶಗಳಿಗೆ ವಲಸೆ ಹೋಗುವ ಕುಟುಂಬಗಳ ಸಂಖ್ಯೆ ಕಡಿಮೆಯಾಗಲಿದೆ. ಸ್ವಗ್ರಾಮದಲ್ಲೇ ಉದ್ಯೋಗ ದೊರೆಯುವುದರಿಂದ ಕುಟುಂಬದ ಆದಾಯಕ್ಕೆ ಆಸರೆಯಾಗುವುದರ ಜೊತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಜೀವನೋಪಾಯದ ಭದ್ರತೆ ಅಗತ್ಯವಿರುವ ಜನರನ್ನು ಯೋಜನೆಯ ವ್ಯಾಪ್ತಿಗೆ ತರುವುದಕ್ಕೆ ಅಭಿಯಾನದಲ್ಲಿ ಆದ್ಯತೆ ನೀಡಲಾಗಿದೆ.ಈ ಹಿಂದೆ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂಬುವುದಾಗಿದ್ದ ಹೆಸರನ್ನು ಇದೀಗ ಕೇಂದ್ರ ಸರ್ಕಾರ ವಿಬಿಜಿ ರಾಮ್ ಜಿ ಯೋಜನೆಯನ್ನಾಗಿ ಮರುನಾಮಕರಣ ಮಾಡಿದೆ. ಕಾಮಗಾರಿಗಳಲ್ಲಿ ಕೂಲಿಯಾಳುಗಳ ಹಾಜರಾತಿ, ಕಾಮಗಾರಿಗಳ ಪ್ರಗತಿ ಹಾಗೂ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆ ಮೂಲಕ ನಿರ್ವಹಿಸುವುದಕ್ಕೆ ಒತ್ತು ನೀಡಲಾಗಿದೆ. ಇದರೊಂದಿಗೆ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಹಾಗೂ ಪರಿಣಾಮಕಾರಿತ್ವ ಹೆಚ್ಚಿಸುವ ನಿಟ್ಟಿನಲ್ಲಿ ಡಿಜಿಟಲ್ ಪ್ರಕ್ರಿಯೆಗಳನ್ನು ಬಳಸಲಾಗುತ್ತಿದೆ.ಬರ ಪರಿಸ್ಥಿತಿಯನ್ನು ಎದುರಿಸುವುದರ ಜೊತೆಗೆ ದೀರ್ಘಕಾಲಿನ ಜೀವನೋಪಾಯಕ್ಕೆ ನೆರವಾಗುವ ಕಾಮಗಾರಿಗಳಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಜಲಸಂರಕ್ಷಣೆ, ಅಂತರ್ಜಲ ಮರುಪೂರಣ ಸೇರಿದಂತೆ ಗ್ರಾಮೀಣ ಪ್ರದೇಶದ ಪರಿಸರ ಹಾಗೂ ಕೃಷಿಗೆ ಪೂರಕವಾಗುವ ಕಾಮಗಾರಿಗಳ ಮೂಲಕ ಉದ್ಯೋಗ ಸೃಷ್ಟಿಸುವ ಆಶಯ ಹೊಂದಲಾಗಿದೆ. ಇಂತಹ ಕಾಮಗಾರಿಗಳು ಒಂದೆಡೆ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಿದರೆ, ಮತ್ತೊಂದೆಡೆ ಭವಿಷ್ಯದಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸಲು ಸಹಕಾರಿಯಾಗಲಿದೆ.ಅರ್ಹ ಕುಟುಂಬಗಳಿಗೆ ಹೊಸ ಜಾಬ್ ಕಾರ್ಡ್ ವಿತರಣೆ, ನಿಷ್ಕ್ರೀಯ ಜಾಬ್ ಕಾರ್ಡ್‌ಗಳ ಗುರುತಿಸುವಿಕೆ ಮತ್ತು ನವೀಕರಣ, ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು. ಗ್ರಾಮೀಣ ಕುಟುಂಬಗಳಿಂದ ಉದ್ಯೋಗದ ಬೇಡಿಕೆ ಸ್ವೀಕರಿಸುವುದು. ಹೆಚ್ಚಿನ ಮಾನವ ದಿನಗಳ ಉದ್ಯೋಗ ಸೃಷ್ಟಿ, ದುರ್ಬಲ ವರ್ಗದ ಜನರ ಯೋಜನಾ ಭಾಗವಹಿಸುವಿಕೆ ಹೆಚ್ಚಿಸುವುದು. ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ನಡೆಯುವ ಉದ್ಯೋಗ ವಲಸೆಗೆ ಕಡಿವಾಣ ಹಾಕುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.ಸಮಾನ ಕೂಲಿಯೊಂದಿಗೆ ಸಮಾನ ವೇತನ ನೀಡುವ ದಿಸೆಯಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆಂಡ್ ಅಜೀವಿಕ ಮಿಷನ್ ಜಾಬ್ ಕಾರ್ಡ್ ಮೇಳ ಪ್ರಾರಂಭಗೊಂಡಿದೆ. ಗ್ರಾಮೀಣ, ದುರ್ಬಲ ಜನರ ಜೀವನೋಪಾಯ ಭದ್ರತೆ ಒದಗಿಸಲು ಸಹಕಾರಿಯಾಗಲಿದೆ. ಜೊತೆಗೆ ಗ್ರಾಮೀಣ ಭಾಗ ಜನರ ಆರ್ಥಿಕ ಜೀವನ ಸುಧಾರಣೆಯಾಗಲಿದೆ.

ವಿಬಿಜಿ ರಾಮ್ ಜಿ ಕುರಿತು ಅರಿವು ಮೂಡಿಸಲು ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಅರ್ಹ ಕುಟುಂಬಗಳಿಗೆ ನಿಯಮಾನುಸಾರ ಕೆಲಸ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

- ರಾಹುಲ್ ಶಿಂಧೆ, ಸಿಇಒ ಜಿಪಂ ಬೆಳಗಾವಿ.ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಮೇಳಗಳನ್ನು ನಡೆಸುವ ಮೂಲಕ ಅರ್ಹ ಗ್ರಾಮೀಣ ಕುಟುಂಬಗಳನ್ನು ಯೋಜನೆಯೊಂದಿಗೆ ಜೋಡಿಸುವುದು. ಹೆಚ್ಚಿನ ಪ್ರಮಾಣದಲ್ಲಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

- ರವೀಂದ್ರ ಬಂಗಾರೆಪನ್ನವರ, ಯೋಜನಾ ನಿರ್ದೇಶಕರು ಜಿಪಂ ಬೆಳಗಾವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಮಳ ಪುರಸ್ಕಾರಕ್ಕೆ ಜಂಗಲ್, ನೀಲಗಾರ ಆಯ್ಕೆ
ಕುಂದಾಪುರ ಕನ್ನಡಪ್ರಭ ವರದಿಗಾರನ ಮೇಲೆ ಹಲ್ಲೆ ಖಂಡನೆ