ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಮತದಾನ ಆಗಬೇಕು. ಮತಗಟ್ಟೆಗಳಲ್ಲಿ ಮತದಾರರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುತ್ತದೆ.
ಧಾರವಾಡ:
ದೇಶದ ಪ್ರಜಾಪ್ರಭುತ್ವ ಸಧೃಡಗೊಳಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಮತ್ತು ಬೇರೆಯವರನ್ನು ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.ಕರ್ನಾಟಕ ಕಲಾ ಮತ್ತು ಕರ್ನಾಟಕ ವಿಜ್ಞಾನ ಕಾಲೇಜಿನ ಎನ್.ಎಸ್.ಎಸ್ ಘಟಕಗಳು, ಕರ್ನಾಟಕ ವಿವಿ ಎನ್ನೆಸ್ಸೆಸ್ ಕೋಶ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಮಂಗಳವಾರ ಕರ್ನಾಟಕ ಕಾಲೇಜಿನ ಆವರಣದಲ್ಲಿ ‘ಮತದಾನ ಜಾಗೃತಿ’ ಕುರಿತು ಆಯೋಜಿಸಿದ್ದ ಜಾಥಾಗೆ ಚಾಲನೆ ನೀಡಿದ ಅವರು, ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಮತದಾನ ಆಗಬೇಕು. ಮತಗಟ್ಟೆಗಳಲ್ಲಿ ಮತದಾರರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಶೇಕಡಾವಾರು ಮತದಾನ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯು ಜನರಲ್ಲಿ ಅರಿವು ಮೂಡಿಸುವ ಹಲವಾರು ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.
ಈ ಬಾರಿ ಚುನಾವಣೆಯಲ್ಲಿ ಮತದಾರರ ಮಾಹಿತಿ ಮತ್ತು ಮತಗಟ್ಟೆಯ ಮಾಹಿತಿಯನ್ನು ಕ್ಯೂ ಆರ್ ಕೋಡ್ ತಂತ್ರಜ್ಞಾನ ಮತ್ತು ವಿಶೇಷ ತಂತ್ರಾಂಶ ಬಳಕೆ ಮಾಡಲಾಗುತ್ತದೆ ಎಂದ ಅವರು, ಚುನಾವಣೆಯಲ್ಲಿ ಯುವ ಮತದಾರರ ಪಾತ್ರ ಬಹಳ ಇದೆ. ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಮತದಾನ ಮಾಡಲು ಅರ್ಹ ಪುರುಷ ಮತ್ತು ಮಹಿಳಾ ಮತದಾರರು ಚುಣಾವಣೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು
ಕರ್ನಾಟಕ ಕಾಲೇಜು ಆವರಣದಿಂದ ಆರಂಭವಾದ ಜಾಥಾ ಸಪ್ತಾಪೂರ, ಜಯನಗರ, ಶ್ರೀನಗರ, ಶಿವಗಿರಿ, ವಿವೇಕಾನಂದ ವೃತ್ತದ ಮೂಲಕ ಕರ್ನಾಟಕ ಕಾಲೇಜಿಗೆ ಕೊನೆಗೊಂಡಿತು. ಈ ವೇಳೆ ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಂಯೋಜಕ ಡಾ. ಎಂ.ಬಿ. ದಳಪತಿ, ಪ್ರಾಚಾರ್ಯ ಡಾ. ಎಂ.ಎಸ್. ಸಾಳುಂಕೆ, ಡಾ. ಎಸ್.ಎಸ್. ಮಂಗಳವೇಡಿ, ಡಾ. ಎಸ್.ಎ. ಕೋಳೂರ, ಡಾ. ಮುಕುಂದ ಲಮಾಣಿ, ಡಾ. ವೀರೇಂದ್ರ ಯಾದವ, ಡಾ. ಎಸ್.ಜಿ. ಜಾಧವ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.