ಕಾಂಗ್ರೆಸ್ ಸಂಘಟನೆಗೆ ವಿಜಯ ರಾಮೇಗೌಡರಿಗೆ ಅಧಿಕಾರ ನೀಡಿ: ಅಭಿಮಾನಿಗಳ ಬಳಗ ಆಗ್ರಹ

KannadaprabhaNewsNetwork |  
Published : Jan 12, 2026, 02:00 AM IST
8ಕೆಎಂಎನ್ ಡಿ16 | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸ ತುಂಬುವ ನಾಯಕತ್ವದ ಕೊರತೆ ಕಾಡುತ್ತಿದೆ. ಪಕ್ಷದ ಬೆಂಬಲಿತ ಮತದಾರರ ಹಿತದೃಷ್ಟಿಯಿಂದ ಮುಖಂಡ ವಿಜಯ ರಾಮೇಗೌಡರಿಗೆ ರಾಜ್ಯ ಮಟ್ಟದಲ್ಲಿ ಯಾವುದಾರೊಂದು ಸಂವಿಧಾನಿಕ ಅಧಿಕಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸ ತುಂಬುವ ನಾಯಕತ್ವದ ಕೊರತೆ ಕಾಡುತ್ತಿದೆ. ಪಕ್ಷದ ಬೆಂಬಲಿತ ಮತದಾರರ ಹಿತದೃಷ್ಟಿಯಿಂದ ಮುಖಂಡ ವಿಜಯ ರಾಮೇಗೌಡರಿಗೆ ರಾಜ್ಯ ಮಟ್ಟದಲ್ಲಿ ಯಾವುದಾರೊಂದು ಸಂವಿಧಾನಿಕ ಅಧಿಕಾರ ನೀಡಬೇಕು ಎಂದು ಅಭಿಮಾನಿ ಬಳಗ ಆಗ್ರಹಿಸಿತು.

ಪಟ್ಟಣದ ಹೋಟೆಲ್ ರಾಮದಾಸ್‌ನ ಸುಲೋಚನಮ್ಮ ಪಾರ್ಟಿ ಹಾಲ್‌ನಲ್ಲಿ ವಿಜಯ ರಾಮೇಗೌಡರ ಮಿತ್ರ ಫೌಂಡೇಷನ್ ವತಿಯಿಂದ ನಡೆದ ನೂತನ ಕ್ಯಾಲೆಂಡರ್ ಬಿಡುಗಡೆ ಮತ್ತು ಅಭಿಮಾನಿಗಳ ಸಭೆಯಲ್ಲಿ ಮಾತನಾಡಿ, ಬಹುತೇಕರು ವಿಜಯ ರಾಮೇಗೌಡರಿಗೆ ಅಧಿಕಾರ ನೀಡುವಂತೆ ಒತ್ತಾಯಿಸಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ಎಲ್ಲಾ ಕಾರ್ಯಕರ್ತರನ್ನು ಹುರಿದುಂಬಿಸಿ ಒಗ್ಗೂಡಿಸಿಕೊಂಡು ಮುನ್ನಡೆಸುವ ನಾಯಕತ್ವದ ಕೊರತೆ ಎದುರಾಗಿದೆ. ಕಳೆದ ವಿಧಾನ ಸಭಾ ಚುನಾವಣೆಗೂ ಮುನ್ನ ನಡೆದ ಭಾರತ್ ಜೋಡೋ ಯಾತ್ರೆ ಸೇರಿದಂತೆ ಹತ್ತು ಹಲವು ಪಕ್ಷ ಸಂಘಟನೆಯ ಕಾರ್ಯಕ್ರಮಗಳಲ್ಲಿ ವಿಜಯ ರಾಮೇಗೌಡರನ್ನು ಬಳಕೆ ಮಾಡಿಕೊಂಡ ಪಕ್ಷ ಆನಂತರ ಅವರಿಗೆ ಟಿಕೆಟ್ ನೀಡದೆ ವಂಚಿಸಿತು ಎಂದು ಬೇಸರ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಸ್ವಾರ್ಥ ರಾಜಕಾರಣದಿಂದ ಯಾವುದೇ ರೀತಿಯಲ್ಲಿಯೂ ಪಕ್ಷಕ್ಕೆ ಸಹಕಾರಿಯಾಗಲ್ಲ. ತಾಲೂಕಿನಲ್ಲಿ ಕಾಂಗ್ರೆಸ್ ಸುಭದ್ರವಾಗಿದ್ದರೂ ಅದನ್ನು ಮುನ್ನಡೆಸಲು ಸಮರ್ಥ ನಾಯಕರ ಕೊರತೆಯಿದೆ. ವಿಜಯ ರಾಮೇಗೌಡರಿಗೆ ಜವಾಬ್ದಾರಿ ನೀಡುವ ಮೂಲಕ ಕಾರ್ಯಕರ್ತರಿಗೆ ಇರುವ ಗೊಂದಲವನ್ನು ನಾಯಕರು ಪರಿಹರಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ವಿಜಯ ರಾಮೇಗೌಡ ಮಾತನಾಡಿ, ಕಳೆದ ಚುನಾವಣೆ ವೇಳೆ ಪಕ್ಷ ನನಗೆ ಟಿಕೆಟ್ ನೀಡುವ ಭರವಸೆ ನೀಡಿತ್ತು. ಆದರೆ, ಅಂದಿನ ಸಾಂದರ್ಭಿಕ ರಾಜಕಾರಣದಲ್ಲಿ ನನಗೆ ಟಿಕೆಟ್ ಸಿಗಲಿಲ್ಲ. ಈಗಲೂ ನಾನು ನಿಷ್ಠಾವಂತ ಕಾಂಗ್ರೆಸ್ಸಿಗ. ನನಗೆ ಯಾವುದೇ ರಾಜಕೀಯ ಅಧಿಕಾರ ಇಲ್ಲದ ಕಾರಣ ನನ್ನ ವೈಯಕ್ತಿಕ ಸೇವೆಯನ್ನಷ್ಟೇ ನನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ನೀಡಲು ಸಾಧ್ಯ ಎಂದರು.

ಶೀಘ್ರ ತಾಪಂ, ಜಿಪಂ, ಗ್ರಾಪಂ, ಪುರಸಭೆ ಮತ್ತು ಎಪಿಎಂಸಿ ಚುನಾವಣೆಗಳು ಸಾಲು ಸಾಲಾಗಿ ಬರಲಿವೆ. ಪಕ್ಷ ಸೂಕ್ತ ಜವಾಬ್ದಾರಿ ನೀಡಿದರೆ ಅದನ್ನು ನಿರ್ವಹಿಸುತ್ತೇನೆ. ಅಧಿಕಾರ ಇರಲಿ ಅಥವಾ ಇಲ್ಲದಿರಲಿ ನನ್ನ ಸಮಾಜ ಸೇವೆ ಮುಂದುವರಿಯಲಿದೆ ಎಂದರು.

ಈ ವೇಳೆ ರಾಜ್ಯ ನಗರ ನೈರ್ಮಲ್ಯ ಮತ್ತು ಹಣಕಾಸು ಸಂಸ್ಥೆಯ ಮಾಜಿ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಷ್, ಜಿಪಂ ಮಾಜಿ ಸದಸ್ಯರಾದ ಕೋಡಿಮಾರನಹಳ್ಳಿ ದೇವರಾಜು, ಕೊಟಗಹಳ್ಳಿ ಮಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ಬೂಕನಕೆರೆ ಜವರಾಯಿಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಿಪುರ ನಂಜಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಮಡುವಿನಕೋಡಿ ಲೋಕೇಶ್, ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದ ರಾಜು, ಪುರಸಭಾ ಸದಸ್ಯ ಡಿ.ಪ್ರೇಮ ಕುಮಾರ್, ಡಾ.ರಾಮಕೃಷ್ಣೇಗೌಡ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ