ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಯು ರಾಜ್ಯದ ಬಡವರು, ಮಹಿಳೆಯರು ಮತ್ತು ಯುವಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಇದುವರೆಗೆ 1.12 ಲಕ್ಷ ಕೋಟಿ ರು. ವ್ಯಯಿಸಲಾಗಿದೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿ ಇದುವರೆಗೆ 647.59 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಯು ರಾಜ್ಯದ ಬಡವರು, ಮಹಿಳೆಯರು ಮತ್ತು ಯುವಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಇದುವರೆಗೆ 1.12 ಲಕ್ಷ ಕೋಟಿ ರು. ವ್ಯಯಿಸಲಾಗಿದೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿ ಇದುವರೆಗೆ 647.59 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್ ಮಾಹಿತಿ ನೀಡಿದರು.ನಗರದ ಹೊರ ವಲಯದಲ್ಲಿರುವ ಆಕ್ಸಿರಿಚ್ ರೆಸಾರ್ಟಲ್ಲಿ ಶನಿವಾರ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸರ್ಕಾರ ಜಿಎಸ್‌ಟಿ ಸಂಗ್ರಹಣೆಯಲ್ಲಿ ಸರಾಸರಿ ಹೆಚ್ಚಳವಾಗಿದೆ. ಐದು ಗ್ಯಾರಂಟಿ ಯೋಜನೆ ಜಾರಿಯಿಂದ ಶೇ. 24 ರಷ್ಟು ಜಿಡಿಪಿ ದರ ಹೆಚ್ಚಳವಾಗಿದೆ. ನಿರುದ್ಯೋಗ ಪ್ರಮಾಣ ಶೇ. 4.3ರಷ್ಟು ಇದ್ದದ್ದು ಈಗ ಶೇ. 2.5ಕ್ಕೆ ಇಳಿಕೆಯಾಗಿದೆ. ಮಹಿಳೆಯರು ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲಿ ಶೇ. 25ರಿಂದ 30ಕ್ಕೆ ಏರಿಕೆಯಾಗಿರುವುದು ವಿಶೇಷವಾಗಿದೆ. ಜೊತೆಗೆ ರಾಷ್ಟ್ರದ ತಲಾ ಆದಾಯದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿರುವುದು ವಿಶೇಷವೇ ಸರಿ ಎಂದು ಮೆಹರೋಜ್ ಖಾನ್ ನುಡಿದರು. ಜನಪರವಾದ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಪ್ರಣಾಳಿಕೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಅದರಂತೆ ಐದು ಗ್ಯಾರಂಟಿ ಯೋಜನೆಯನ್ನು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸಲಾಗಿದೆ. ಆ ದಿಸೆಯಲ್ಲಿ ಕಾಲ ಮಿತಿಯಲ್ಲಿ ಸರ್ಕಾರ ಅನುಷ್ಠಾನಗೊಳಿಸಿದೆ ಎಂದು ಅವರು ತಿಳಿಸಿದರು.ರಾಜ್ಯದಲ್ಲಿ ವರ್ಷಕ್ಕೆ ಸರ್ಕಾರ 52 ಸಾವಿರ ಕೋಟಿ ರು.ವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗ ಮಾಡುತ್ತದೆ ಎಂದು ವಿವರಿಸಿದ ಅವರು, ರಾಜ್ಯದಲ್ಲಿ ಬಡತನ ಪ್ರಮಾಣ ಕಡಿಮೆ ಮಾಡಬೇಕು. ಮಹಿಳೆಯರು ಮತ್ತು ಯುವಜನರಿಗೆ ಶಕ್ತಿ ನೀಡಬೇಕು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು. ಶೇಕಡಾವಾರು ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿದ್ದು, ಇದೊಂದು ಸರ್ಕಾರದ ಮಹತ್ವದ ಕಾರ್ಯವಾಗಿದೆ ಎಂದು ಹೆಮ್ಮೆಯಿಂದ ನುಡಿದರು. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಹಣ ಬಳಸಲು ಸಾಧ್ಯವಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದವು. ಆದರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜೊತೆಗೆ ಅಭಿವೃದ್ಧಿ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ ಎಂದು ಅವರು ತಿಳಿಸಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದಿಗೂ ಸಹ ಬಡತನವಿದ್ದು, ಗ್ಯಾರಂಟಿ ಯೋಜನೆಗಳು ಎಷ್ಟು ಉಪಯುಕ್ತವಾಗಿವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಕರ್ನಾಟಕದ ಎಲ್ಲಾ ಭಾಗದಲ್ಲಿಯೂ ಅಭಿವೃದ್ಧಿ ಆಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಬಡವರಿಗೆ, ಮಹಿಳೆಯರಿಗೆ ಮತ್ತು ಯುವ ಜನರಿಗೆ ಶಕ್ತಿ ನೀಡಿದೆ ಎಂದು ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷರು ಹೇಳಿದರು.ಗ್ಯಾರಂಟಿ ಯೋಜನೆಯಿಂದ ಬಡತನ ಪ್ರಮಾಣ ಶೇ.12 ರಷ್ಟು ಇಳಿಕೆಯಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶದಿಂದ ನಗರಪ್ರದೇಶಗಳಿಗೆ ವಲಸೆ ಹೋಗುವವರ ಪ್ರಮಾಣ ಶೇ.15 ರಷ್ಟು ಇಳಿಕೆಯಾಗಿದೆ. ಹಾಗೆಯೇ ಅಪೌಷ್ಠಿಕತೆಯು ಶೇ. 50ರಷ್ಟು ಕಡಿಮೆಯಾಗಿದೆ ಎಂದು ವಿವರಿಸಿದರು.ಶಕ್ತಿ ಯೋಜನೆಯಿಂದ ದೇವಸ್ಥಾನಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆರ್ಥಿಕ ಚಟುವಟಿಕೆ ವಿನಿಮಯ ಆಗುತ್ತಿದೆ ಎಂದು ನುಡಿದರು.ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಂಡಿದ್ದು, ಜಿಲ್ಲೆಯ ರಸ್ತೆ ಅಭಿವೃದ್ಧಿ ಕಾರ್ಯವು ಮೇ ಅಂತ್ಯದೊಳಗೆ ಶೇ.75 ರಷ್ಟು ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು
ಬಳಿಕ ಸಂವಾದ ಸಂದರ್ಭದಲ್ಲಿ ಪತ್ರಕರ್ತರು ಕೊಡಗು ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಯಾಗಬೇಕು. ಗೃಹಲಕ್ಷ್ಮಿ ಯೋಜನೆ ಹಣ ಪ್ರತಿ ತಿಂಗಳು ಬಿಡುಗಡೆಯಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನಾ ಕಾರ್ಯಕ್ರಮಗಳ ಅನುದಾನ ಪರಿಶಿಷ್ಟರಿಗೆ ಬಳಸಬೇಕು. ಮತ್ತಿತರ ಬಗ್ಗೆ ಗಮನ ಸೆಳೆದರು.ಈ ಕುರಿತು ಪ್ರತಿಕ್ರಿಯಿಸಿದ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಮೆಹರೋಜ್ ಖಾನ್ ಅವರು ಕೊಡಗಿನಲ್ಲಿ ಶಾಸಕದ್ವಯರ ಪ್ರಯತ್ನದಿಂದ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದು, ರಸ್ತೆ ಸೇರಿದಂತೆ ಆಸ್ಪತ್ರೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.ಕೊಡಗು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ಪರಿಸರ ಸಂರಕ್ಷಣೆ ಜೊತೆಗೆ ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್ ಸ್ವಾಗತಿಸಿ, ನಿರೂಪಿಸಿದರು. ಸಂಘದ ಪ್ರಧಾನ ಕಾರ್‍ಯದರ್ಶಿ ಸುರೇಶ್ ಬಿಳಿಗೇರಿ, ಪತ್ರಕರ್ತರ ಸಂಘದ ಕ್ಷೇಮಾಭಿವೃದ್ದಿ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್ ಉಪಸ್ಥಿತರಿದ್ದರು. ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್, ಪ್ರಮುಖರಾದ ಮುನೀರ್ ಅಹ್ಮದ್, ಅಂಬೆಕಲ್ಲು ನವೀನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ಕೊಲ್ಯದ ಗಿರೀಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.