ಕನ್ನಡಪ್ರಭ ವಾರ್ತೆ ಬೆಳಗಾವಿಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್‌ಗೆ ಮತ ಹಾಕಿದರೆ ನನಗೆ ಮತ ಹಾಕಿದಂತೆ, ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಖಚಿತ ಎಂದು ಶಾಸಕ ಮಹಾಂತೇಶ ಕೌಜಲಗಿ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಅತ್ಯಧಿಕ ಮತಗಳಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಅವರನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸೋಣ, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರನ್ನು ಸೋಲಿಸಿ ಮನೆಗೆ ಕಳುಹಿಸೋಣ ಎಂದರು. ಮೃಣಾಲ್ ಗೆದ್ದರೆ, ನನ್ನ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲೆಯ ಎಲ್ಲ ಶಾಸಕರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದಾನೆ. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸು ಹೊಂದಿದ್ದಾನೆ ಎಂದು ಹೇಳಿದರು.
ಭ್ರಷ್ಟ ಬಿಜೆಪಿ ಸರ್ಕಾರ, ಕೋವಿಡ್ ವೇಳೆ ಜನರ ರಕ್ತ ಹೀರಿತ್ತು. ಇದಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹಾಜನತೆ ತಕ್ಕ ಉತ್ತರ ನೀಡಿದ್ದರು. ಕಳೆದ ಅವಧಿಯಲ್ಲಿ 40 ಪರ್ಸೆಂಟ್ ತಿಂದು ಮನೆಯಲ್ಲಿ ಕುಳಿತಿರುವ ಬಿಜೆಪಿಗರು ಸುಖಾಸುಮ್ಮನೆ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯ ಭ್ರಷ್ಟಾಚಾರಕ್ಕೆ ನಲುಗಿ ಸಂತೋಷ ಪಾಟೀಲ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಭ್ರಷ್ಟಾಚಾರಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕೆ? ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಐದು ಗ್ಯಾರಂಟಿ ಯೋಜನೆಗಳ ಲಾಭ ಆಗುತ್ತಿದೆ. ಇದನ್ನು ಸಹಿಸದ ಬಿಜೆಪಿಯವರು ಲೋಕಸಭೆ ಆದ್ಮೇಲೆ ಗ್ಯಾರಂಟಿ ಯೋಜನೆಗಳು ಬಂದ್ ಆಗಲಿವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿಯವರು ಮೋದಿ ನೋಡಿ ಮತ ಹಾಕಿ, ಶೆಟ್ಟರ್ ನೋಡ್ಬೇಡಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ಬಿಜೆಪಿ ಅಭ್ಯರ್ಥಿಗೆ ಯೋಗ್ಯತೆ ಇಲ್ಲವೆಂಬುದೇ ಅರ್ಥ. ಕಾಂಗ್ರೆಸ್ ಪಕ್ಷ ಎಂದರೆ ಬದ್ಧತೆ ಹೊಂದಿರುವ ಪಕ್ಷ, ಶೆಟ್ಟರ್ ಅವರನ್ನು ವಾಪಸ್ ಹುಬ್ಬಳ್ಳಿಗೆ, ಮೃಣಾಲ್ ದೆಹಲಿಗೆ ಕಳುಹಿಸೋಣ ಎಂದು ಸಲಹೆ ನೀಡಿದರು.