ದೇಶ ಆಳುವ ಕಾಂಗ್ರೆಸ್ಸ್‌ ಕನಸು ತಮಾಷೆಯ ವಿಚಾರ: ಡಿ.ವಿ.ಸದಾನಂದ ಗೌಡ

KannadaprabhaNewsNetwork | Published : Apr 19, 2024 1:09 AM

ಸಾರಾಂಶ

ಐಎನ್‌ಡಿಐಎ ಒಕ್ಕೂಟದ ಮೂಲಕ ಕಾಂಗ್ರೆಸ್ 200 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಮೈತ್ರಿ ಪಕ್ಷದ ನಾಯಕರು ಪ್ರತಿಯೊಬ್ಬರೂ ನಾವೇ ಪ್ರಧಾನಿ ಅಭ್ಯರ್ಥಿ ಅನ್ನುತ್ತಿರುವುದು ಎಲ್ಲೆಡೆ ಕೇಳಿ ಬರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಲೇವಡಿ ಮಾಡಿದ್ದಾರೆ. ಕುಶಾಲನಗರದ ಗೌಡ ಸಮಾಜ ಆವರಣದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತಕ್ಕೆ ಬೇಕಾದಷ್ಟು ಕಡೆಗಳಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಆದರೂ ನಾವೇ ದೇಶದ ಆಳ್ವಿಕೆ ಮಾಡುತ್ತೇವೆ ಅನ್ನೋದು ಕಾಂಗ್ರೆಸಿನ ಬಹುದೊಡ್ಡ ತಮಾಷೆಯ ವಿಷಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಕುಶಾಲನಗರದ ಗೌಡ ಸಮಾಜ ಆವರಣದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಐಎನ್‌ಡಿಐಎ ಒಕ್ಕೂಟದ ಮೂಲಕ ಕಾಂಗ್ರೆಸ್ 200 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಮೈತ್ರಿ ಪಕ್ಷದ ನಾಯಕರು ಪ್ರತಿಯೊಬ್ಬರೂ ನಾವೇ ಪ್ರಧಾನಿ ಅಭ್ಯರ್ಥಿ ಅನ್ನುತ್ತಿರುವುದು ಎಲ್ಲೆಡೆ ಕೇಳಿ ಬರುತ್ತಿದೆ ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆ ಸರ್ಕಾರದ ಖಜಾನೆ ಖಾಲಿಯಾಗುವ ಸಂದರ್ಭ ಬಂದ್ ಆಗುತ್ತೆ ಎಂದು ಹೇಳಿದ ಸದಾನಂದ ಗೌಡ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರದ್ದು ನಿರಂತರ ಹಾಗೂ ಶಾಶ್ವತ ಯೋಜನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ:

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ರಾಮನ ವಿಷಯಕ್ಕೆ ನಡೆದ ಹಲ್ಲೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಗೌಡರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭ ಈ ರೀತಿಯ ಘಟನೆ ನಡೆಯುತ್ತಿರುವುದು ಸಾಮಾನ್ಯವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭಯೋತ್ಪಾದಕರಿಗೆ, ಕಾನೂನು ಕೈಗೆತ್ತಿಕೊಳ್ಳುವವರಿಗೆ ಕಾಂಗ್ರೆಸ್ ಕಾಲಘಟ್ಟ ಸ್ವರ್ಗಮಯವಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದು ಜನರ ದುರ್ದೈವ ಎಂದ ಅವರು, ಈ ಬಾರಿಯದ್ದು ವಿಭಿನ್ನ ಚುನಾವಣೆಯಾಗಿದ್ದು ಜಾತಿ ಲೆಕ್ಕಾಚಾರ ನಡೆಯುವುದಿಲ್ಲ. ಮೋದಿ ಕಾರ್ಯವೈಖರಿ ಜನಪರವಾಗಿದ್ದು ಮೂರನೇ ಅವಧಿಗೆ ಕೇಂದ್ರದಲ್ಲಿ ಮುಂದುವರಿಸಲು ಅಗತ್ಯ ಬೆಂಬಲ ಬೇಕಾಗಿದೆ ಎಂದರು.

ಜೆಡಿಎಸ್ ವರಿಷ್ಠ ದೇವೇಗೌಡ ಅವರು ದೇಶದಲ್ಲಿ ಮತ್ತೆ ಭ್ರಷ್ಟಾಚಾರ ರಹಿತ ಆಡಳಿತ ಮುಂದುವರಿಯಬೇಕು ಎನ್ನುವ ದೃಷ್ಟಿಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು.

ಕುರ್ಚಿ ಅಜೆಂಡಾ:

ಕಾಂಗ್ರೆಸ್ ಕುರ್ಚಿ ಅಜೆಂಡದಿಂದ ಇನ್ನೂ ಹೊರ ಬಂದಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ ಎಂದು ಅವರು ಹೇಳಿದರು.

ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯ ಸರ್ಕಾರ ಜನವಿರೋಧಿ, ರೈತ ವಿರೋಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿಗೆ ಇನ್ನೂ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಬಿಜೆಪಿ ಅವಧಿಯ ಕಾಮಗಾರಿಗಳನ್ನು ತನ್ನದೆಂದು ಹೇಳಿಕೊಂಡು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಕಾಂಗ್ರೆಸ್ ಜಾತಿ ಒಡೆಯುವ ಕೆಲಸ ಮಾಡುತ್ತಿದೆ. ಜಾತಿಯ ವಿಷ ಬೀಜ ಬಿತ್ತುತ್ತಿದ್ದು ಈ ಮೂಲಕ ಮತಗಳನ್ನು ಒಡೆಯುವ ಷಡ್ಯಂತ್ರ ಮಾಡುತ್ತಿದೆ ಎಂದರು.

ಜೆಡಿಎಸ್ ಜಿಲ್ಲಾ ಪ್ರಮುಖ ಸಿ.ಎಲ್‌. ವಿಶ್ವ ಮಾತನಾಡಿ, ಈ ಚುನಾವಣೆಯಲ್ಲಿ ಜಾತಿ ರಾಜಕಾರಣ ನಡೆಯಲು ಅಸಾಧ್ಯ. ರೈತರ ಸಂಕಷ್ಟಕ್ಕೆ ಕೇಂದ್ರ ಹಲವು ಯೋಜನೆಗಳನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಮೋದಿ ಅವರ ನಾಯಕತ್ವಕ್ಕೆ ಪ್ರಾಮಾಣಿಕವಾಗಿ ಬೆಂಬಲ ನೀಡುವುದಾಗಿ ಘೋಷಿಸಿದರು.

ಕುಶಾಲನಗರ ಬಿಜೆಪಿ ಅಧ್ಯಕ್ಷ ಎಂ. ಚರಣ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ತಾಲೂಕು ಅಧ್ಯಕ್ಷ ಗೌತಮ್, ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಜಿ.ಪಂ. ಮಾಜಿ ಸದಸ್ಯೆ ಮಂಜುಳಾ, ಜೆಡಿಎಸ್ ಪ್ರಮುಖರಾದ ರಾಮಣ್ಣ, ಚಂದ್ರು, ವಸಂತ್ ಮತ್ತಿತರರು ಇದ್ದರು.

Share this article