ಕೌಟುಂಬಿಕ ಕಲಹ; ಪತ್ನಿ, ಮಕ್ಕಳಿಗೆ ವಿಷ ಕುಡಿಸಿ ಕೊಂದ ತಂದೆ

KannadaprabhaNewsNetwork | Updated : Apr 19 2024, 12:17 PM IST

ಸಾರಾಂಶ

  ನರಸಿಂಹ ವೃತ್ತಿಯಲ್ಲಿ ಕ್ಷೌರಿಕನಾಗಿದ್ದು, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸೇರಿ ಹಲವು ಕಾರಣಕ್ಕಾಗಿ ಲಕ್ಷಾಂತರ ರು.ಗಳ ಸಾಲ ಮಾಡಿಕೊಂಡಿದ್ದನು. ಅಲ್ಲದೆ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡು ಕೀರ್ತನ ಅವರಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.

 ನಾಗಮಂಗಲ :  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಇಬ್ಬರು ಮಕ್ಕಳು ಹಾಗೂ ಪತ್ನಿಗೆ ವಿಷ ಕುಡಿಸಿ ಕೊಂದು ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಟ್ಟಣದ 8ನೇ ವಾರ್ಡ್‌ನ ಪೇಟೆ ಹೊಲದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಕಂಬದಹಳ್ಳಿ ಪ್ರಮೀಳ ಮತ್ತು ಶಿವನಂಜ ದಂಪತಿ ಪುತ್ರಿ ಕೀರ್ತನ(23), ಮಕ್ಕಳಾದ 2 ವರ್ಷದ ರಿಷಿಕಾ ಹಾಗೂ 4 ವರ್ಷದ ಜಯಸಿಂಹ ಸಾವನ್ನಪ್ಪಿರುವ ನತದೃಷ್ಟ ತಾಯಿ - ಮಕ್ಕಳು, ಮೂಲತಃ ತಾಲೂಕಿನ ತೆಂಗಿನಭಾಗ ಗ್ರಾಮದ ಪಟ್ಟಣ ವಾಸಿ ಸ್ವಾಮಿ ಪುತ್ರ ನರಸಿಂಹ ತನ್ನಿಬ್ಬರು ಮಕ್ಕಳು ಮತ್ತು ಪತ್ನಿಗೆ ವಿಷ ಉಣಿಸಿ ಕೊಂದಿರುವ ಆರೋಪಿ.

ಕಳೆದ ಐದು ವರ್ಷಗಳ ಹಿಂದೆ ಕೀರ್ತನಳನ್ನು ವಿವಾಹವಾಗಿದ್ದ ನರಸಿಂಹ ವೃತ್ತಿಯಲ್ಲಿ ಕ್ಷೌರಿಕನಾಗಿದ್ದು, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸೇರಿ ಹಲವು ಕಾರಣಕ್ಕಾಗಿ ಲಕ್ಷಾಂತರ ರು.ಗಳ ಸಾಲ ಮಾಡಿಕೊಂಡಿದ್ದನು. ಅಲ್ಲದೆ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡು ಕೀರ್ತನ ಅವರಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.

ಇದೇ ವಿಚಾರವಾಗಿ ಕೀರ್ತನ ಪೋಷಕರು ಹಲವು ಬಾರಿ ನರಸಿಂಹನಿಗೆ ಬುದ್ದಿ ಹೇಳಿ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯ್ತಿಯನ್ನೂ ಕೂಡ ನಡೆಸಿದ್ದರೆಂದು ತಿಳಿದುಬಂದಿದೆ.

ಗುರುವಾರ ಬೆಳಿಗ್ಗೆ 11.30ರ ಸಮಯದಲ್ಲಿ ತಾನು ಕೆಲಸ ಮಾಡುತ್ತಿದ್ದ ಕ್ಷೌರಿಕ ಅಂಗಡಿಯಿಂದ ಮನೆಗೆ ಬಂದ ನರಸಿಂಹ, ಜೊತೆಯಲ್ಲಿ ತಂದಿದ್ದ ಮೊಸರಿಗೆ ಕಳೆನಾಶಕವನ್ನು ಮಿಶ್ರಣ ಮಾಡಿ ಪತ್ನಿ ಕೀರ್ತನಾಳ ಕೈಗಳನ್ನು ಹಿಂದಿನಿಂದ ಕಟ್ಟಿ ಬಲವಂತವಾಗಿ ವಿಷ ಕುಡಿಸಿದ ಬಳಿಕ ತನ್ನಿಬ್ಬರು ಮಕ್ಕಳಿಗೂ ವಿಷ ಉಣಿಸಿದ್ದಾನೆ.

ಕೆಲವೇ ಕ್ಷಣಗಳಲ್ಲಿ ತಾಯಿ - ಮಕ್ಕಳು ಸಾವನ್ನಪ್ಪುತ್ತಿದ್ದಂತೆ ನರಸಿಂಹ ಕೋಣೆಯೊಂದರಲ್ಲಿ ವೇಲ್‌ನಿಂದ ನೇಣುಬಿಗಿದುಕೊಳ್ಳಲು ಯತ್ನಿಸಿದ್ದಾನೆ. ಅದು ಸಾಧ್ಯವಾಗದೆ ಉಳಿದಿದ್ದ ವಿಷವನ್ನು ತಾನೂ ಕುಡಿದು ಅಸ್ವಸ್ತನಾಗಿದ್ದನು. ಅದೇ ವೇಳೆಗೆ ಮನೆಗೆ ಬಂದ ನರಸಿಂಹನ ತಂದೆ ಸ್ವಾಮಿ, ಮಗನ ಚೀರಾಟ ಕೇಳಿ ಸಹಾಯಕ್ಕಾಗಿ ಕೂಗಿಕೊಂಡಾಗ ಆಸುಪಾಸಿನ ಮನೆಯವರು ಬಾಗಿಲು ತೆಗೆದು ನೋಡಿದಾಗ ತನ್ನಿಬ್ಬರೂ ಮಕ್ಕಳೊಂದಿಗೆ ತಾಯಿ ಸಾವನ್ನಪ್ಪಿ ಬಿದ್ದಿದ್ದರು. ಮತ್ತೊಂದೆಡೆ ಆರೋಪಿ ನರಸಿಂಹ ಅಸ್ವಸ್ತಗೊಂಡು ಒದ್ದಾಡುತ್ತಿದ್ದನು.

ಸುದ್ದಿ ತಿಳಿಯುತ್ತಿದ್ದಂತೆ ನಾಗಮಂಗಲ ಉಪ ವಿಭಾಗದ ಡಿವೈಎಸ್‌ಪಿ ಡಾ.ಎ.ಆರ್.ಸುಮಿತ್, ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್‌ ಕುಮಾರ್ ಹಾಗೂ ಪಿಎಸ್‌ಐ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತಾಯಿ - ಮಕ್ಕಳ ಮೃತದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು. ತಹಸೀಲ್ದಾರ್ ನಯೀಂ ಉನ್ನೀಸಾ ಆಸ್ಪತ್ರೆ ಶವಾಗಾರಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ನಿರ್ದೇಶನ ನೀಡಿದರು. ಇಬ್ಬರು ಮೊಮ್ಮಕ್ಕಳು ಹಾಗೂ ಮಗಳನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಸಚಿವರ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ:

ಕೌಟುಂಬಿಕ ಕಲಹಕ್ಕೆ ಇಬ್ಬರು ಮಕ್ಕಳು ಮತ್ತು ತಾಯಿ ಬಲಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡು ಸಾಂತ್ವನ ಹೇಳಿದರು.

ಇಬ್ಬರು ಮಕ್ಕಳು ಮತ್ತು ಪತ್ನಿಗೆ ವಿಷ ಕುಡಿಸಿ ಕೊಂದು ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ನರಸಿಂಹನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಾಗಮಂಗಲ ಪಟ್ಟಣ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮವಹಿಸಿದ್ದಾರೆ.

Share this article