ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬಿ ಅವರ ಸಬಲೀಕರಣಕ್ಕೆ ಮುಂದಾಗಿರುವುದು ಕಾಂಗ್ರೆಸ್ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹೇಳಿದರು.ಮಳವಳ್ಳಿ ವಿಧಾನಸಭಾ ಕ್ಷೇತ್ರದ ಹಲವೆಡೆ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿ, ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ನೀಡುತ್ತಿರುವ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ವರ್ಷಕ್ಕೆ 1 ಲಕ್ಷ ರು. ಹಣವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡುವ ಮೂಲಕ ಮನೆ ಯಜಮಾನಿಯನ್ನು ಬಲವರ್ಧನೆಗೊಳಿಸಲು ಹೊರಟಿದೆ ಎಂದರು.
ಈ ವೇಳೆ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಮತ್ತು ರಾಷ್ಟ್ರೀಯ ಕಾಂಗ್ರೆಸ್ ಘೋಷಣೆ ಮಾಡಿರುವ ಹೊಸ ಗ್ಯಾರಂಟಿಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಟ್ಟರು.ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಹೊಸ ಪಥದಲ್ಲಿ ದೇಶದ ಪ್ರಗತಿಯಾಗಲಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನ ಜೊತೆಗೆ ಹೆಣ್ಣು ಆರ್ಥಿಕವಾಗಿ ಶಕ್ತಿವಂತರಾದರೆ ದೇಶವೂ ಆರ್ಥಿಕವಾಗಿ ಪ್ರಗತಿ ಸಾಧಿಸಲಿದೆ ಎಂಬುದನ್ನು ಕಾಂಗ್ರೆಸ್ ನ ಗ್ಯಾರಂಟಿಗಳು ರುಜುವಾತು ಪಡಿಸಿವೆ ಎಂದರು.
ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಎರಡು ಸಾವಿರ ನೀಡಲಾಗುತ್ತಿದೆ. ಉಚಿತ ಬಸ್ ಪ್ರಯಾಣದ ಮೂಲಕ ಹಣ ಉಳಿಸುವ ಕೆಲಸ ಮಾಡಿದೆ. ಐದು ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಗೆ ಹಣ ನೀಡಲಾಗುತ್ತಿದೆ. ಉಚಿತ ವಿದ್ಯುತ್ ನೀಡುವ ಮೂಲಕ ಕುಟುಂಬ ನಿರ್ವಹಣೆಗೆ ಬೇಕಾದ ಅಗತ್ಯತೆಗಳನ್ನು ಕಾಂಗ್ರೆಸ್ ನೀಡುತ್ತಿದೆ. ಇದರಿಂದ ಗ್ರಾಮೀಣ ಮಹಿಳೆಯರಲ್ಲಿ ಖರ್ಚಿನ ಶಕ್ತಿ ಹೆಚ್ಚಾಗುವುದರ ಜೊತೆಗೆ ಹಣ ಉಳಿತಾಯ ಮಾಡಿ ಭವಿಷ್ಯ ಕಟ್ಟಿಕೊಳ್ಳುವಂತಾಗಿದೆ ಎಂದು ವಿವರಿಸಿದರು.ಮಂಡ್ಯ ಜಿಲ್ಲೆಯ 4.49 ಲಕ್ಷ ಮನೆಯ ಯಜಮಾನಿಯರಿಗೆ ತಿಂಗಳಿಗೆ ತಲಾ 2,000 ರುಪಾಯಿಯಂತೆ ಈ ವರೆಗೆ 512 ಕೋಟಿ ರುಪಾಯಿಯನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಇದಲ್ಲದೇ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದಲ್ಲಿ ವರ್ಷಕ್ಕೆ ಒಂದು ಲಕ್ಷ ಹೆಚ್ಚುವರಿಯಾಗಿ ಸಿಗಲಿದೆ. ಅಂದರೆ ಪ್ರತಿ ತಿಂಗಳಿಗೆ ಮಹಿಳೆಯರಿಗೆ 10 ಸಾವಿರಕ್ಕೂ ಅಧಿಕ ಹಣ ಅವರ ಕೈ ಸೇರಿಲಿದೆ. ಮಹಿಳೆಯರಿಗೆ ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟಿರುವ ಕಾಂಗ್ರೆಸ್ ಪಕ್ಷದ ಕೈ ಬಲಪಡಿಸುವ ಹೊಣೆಗಾರಿಕೆ ಮನೆ ಮನೆ ಯಜಮಾನಿಯ ಮೇಲಿದೆ ಎಂದರು.