ಕಿಕ್ಕೇರಿ: ಜ್ಞಾನ, ಧಾರ್ಮಿಕ, ಅಕ್ಷಯದ ಜೊತೆ ಮಹಿಳಾ ಸಬಲೀಕರಣದ ಮೂಲಕ ಸಮುದಾಯದ ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆ ಶ್ರಮಿಸುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.
ಮಹಿಳೆಯರು ಕೌಟುಂಬಿಕ ನೆಮ್ಮದಿ, ಆಧ್ಯಾತ್ಮ, ಧಾರ್ಮಿಕ ಚಿಂತನೆಗಳಿಂದ ಮನಪರಿವರ್ತನೆ ಕಾಣುತ್ತಿದ್ದಾರೆ. ಮದ್ಯವರ್ಜನೆ ಶಿಬಿರದಂತಹ ಯೋಜನೆಗಳು ಸಮುದಾಯಕ್ಕೆ ಒಳಿತಾಗುತ್ತಿವೆ. ಸಂಘ ವಾರದ ಸಭೆ, ಸಮರ್ಪಕವಾಗಿ ಸಾಲ ಮರುಪಾವತಿ, ಮಾಸಿಕ ವರದಿ, ಸುಜ್ಞಾನ ಶಿಷ್ಯವೇತನ, ಪ್ರಗತಿನಿಧಿ, ಲೀಡ್‌ಚೀಟಿ, ವಿಮೆ ಕುರಿತು ಪದಾಧಿಕಾರಿಗಳು ಸರಿಯಾದ ಮಾಹಿತಿ ತಿಳಿದು ಸದಸ್ಯರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ ಎಂದು ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು.
ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ ಮಾತನಾಡಿ, ಮಹಿಳೆಯರು ಸ್ವಾವಲಂಭಿಗಳಾಗಿ ಬದುಕಲು ಸಂಸ್ಥೆ ಹಲವು ಯೋಜನೆಗಳನ್ನು ತಂದಿದೆ. 40 ವರ್ಷಗಳಿಂದ ಮಹಿಳೆಯರ, ಬಡವರ, ರೈತರ ಬಲಸಂವರ್ಧನೆ, ಸಬಲೀಕರಣಕ್ಕೆ ಯೋಜನೆ ಮೂಲಕ ಪೂಜ್ಯರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.ದೇಶದ ಪ್ರಮುಖ 4 ರಾಷ್ಟ್ರೀಕೃತ ಬ್ಯಾಂಕ್‌ಗಳ ಪ್ರತಿನಿಧಿಯಾಗಿ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಶಕ್ತಿ ತುಂಬುತ್ತಿದೆ. ಅರ್ಹ ಸದಸ್ಯರಿಗೆ ಗೌರವಪೂರ್ವಕವಾಗಿ ಲಾಭಾಂಶ ನೀಡಲಾಗುತ್ತಿದೆ ಎಂದು ನುಡಿದರು.
ಮೇಲ್ವಿಚಾರಕಿ ಎಸ್.ರೇಣುಕಾ, ವಿಮಾ ಸಮನ್ವಯಾಧಿಕಾರಿ ಗುರು, ಸೇವಾ ಪ್ರತಿನಿಧಿ ಅರ್ಚನಾ, ಮಂಗಳಾ, ಪ್ರಮೀಳಾ, ಶೃತಿ, ಕವಿತಾ, ಕಲಾವತಿ, ಒಕ್ಕೂಟ ಪದಾಧಿಕಾರಿಗಳು ಹಾಜರಿದ್ದರು.