ಕೃಷ್ಣೆಯೊಡಲು ಖಾಲಿ ಖಾಲಿ: ಸುರಪುರಕ್ಕೆ 2ದಿನಕ್ಕೊಮ್ಮೆ ನೀರು

KannadaprabhaNewsNetwork | Published : Feb 24, 2024 2:37 AM

ಸಾರಾಂಶ

ಯಾದಗಿರಿಯಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಕಂಪಾಪುರದ ಜಾಕ್‌ವೆಲ್‌ನಲ್ಲಿ ಜಲಮೂಲ ಕ್ಷೀಣಿಸುತ್ತಿದ್ದು, ನಾರಾಯಣಪುರ ಜಲಾಶಯದಿಂದ ನದಿಗೆ ನೀರು ಮೀನಾಮೇಷವಾಗಿದ್ದರಿಂದ ಜನಾಕ್ರೋಶಕ್ಕೆ ಕಾರಣವಾಗಿದೆ.

ನಾಗರಾಜ್ ನ್ಯಾಮತಿ

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಜೀವನಾಡಿ ಕೃಷ್ಣೆಯೂ ಬತ್ತಿ ನದಿಯ ಒಡೆಲು ಖಾಲಿ ಖಾಲಿಯಾಗಿ ಬೇಸಿಗೆ ಆರಂಭ ಮುನ್ನವೇ ಸುರಪುರ ನಗರದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

ವರುಣ ಆದಷ್ಟು ಬೇಗ ಕೃಪೆ ತೋರದಿದ್ದರೆ ಜಲಮೂಲ ಬತ್ತಿ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳ ಪರದಾಟ ಊಹಿಸಲೂ ಅಸಾಧ್ಯವಾಗಿದೆ.

ಸುರಪುರ ನಗರದಲ್ಲಿ 70 ಸಾವಿರ ಜನಸಂಖ್ಯೆಯಿದ್ದು, 12,500 ಮನೆಗಳಿಗೆ 24 X 7 ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ. ನದಿಯಲ್ಲಿ ನೀರಿನ ಅಭಾವದಿಂದ ನಿತ್ಯ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಪ್ರಸಕ್ತ ಎರಡ್ಮೂರು ದಿನಗಳಿಂದ ಬೆಳಗ್ಗೆ 7 ರಿಂದ 9 ಗಂಟೆವರೆಗೆ ನೀರು ಪೂರೈಸುತ್ತಿದ್ದು, ಕುಡಿಯುವ ನೀರು ಸಾಲುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ನಾರಾಯಣಪುರ ಜಲಾಶಯ ತುಂಬಿದ್ದು, ಕುಡಿಯುವ ನೀರಿಗೆ ಕೊರತೆ ಆಗಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗದ ಕಾರಣ ನದಿ, ಬಾವಿ. ಹಳ್ಳ ಕೊಳ್ಳ, ಕೆರೆಗಳು ಬತ್ತಿ ನೀರಿನ ಸಮಸ್ಯೆ ತೀವ್ರವಾಗಿ ಬಾಧಿಸುತ್ತಿದೆ.

- ನಾರಾಯಣಪುರ ಡ್ಯಾಂನಲ್ಲಿ ನೀರು:

ಮುಂಗಾರಿನಲ್ಲಿ ಸರಿಯಾಗಿ ಮಳೆಯಾಗದ ಕಾರಣ ಕುಡಿಯುವ ನೀರಿಗೆ ತೊಂದರೆ ಆಗಬಾರದೆಂಬ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ ಹಿಂಗಾರು ಬೆಳೆಗೆ ನೀರು ಪೂರೈಸಿಲ್ಲ. ಆದರೂ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನದಿಗೆ ಹರಿಸಲು ಕ್ರಮ ಕೈಗೊಳ್ಳದ್ದರಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ನಾಲ್ಕೈದು ದಿನದಲ್ಲಿ ನೀರು ಬಿಡದಿದ್ದರೆ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹಣಮಂತ ಮಡಿವಾಳ ಎಚ್ಚರಿಸಿದ್ದಾರೆ.

ಏಳೆಂಟು ವರ್ಷಗಳಲ್ಲಿ ಅಷ್ಟೊಂದು ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಬೇರೆಯೇ ಆಗಿದೆ. ನದಿ, ಕೊಳವೆ ಬಾವಿ, ಕೆರೆಗಳ ನೀರನ್ನು ನಂಬಿಕೊಂಡು ಕೃಷಿ ಮಾಡಿಕೊಂಡವರ ಬದುಕು ಮೂರಾಬಟ್ಟಿಯಾಗಿದೆ. ನದಿ ನಂಬಿದ ಕೃಷಿಕರು ಜಮೀನಿಗೆ ನೀರುಣಿಸಲು ಹರಸಾಹಸ ಮಾಡುತ್ತಿದ್ದಾರೆ. ನದಿಗೆ ನಾಲ್ಕೈದು ದಿನದಲ್ಲಿ ನೀರು ಬಿಡುತ್ತಿದ್ದರೆ ನದಿ ಬತ್ತಿ ಜನ-ಜಾನುವಾರು ಹಾಗೂ ಕೃಷಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.

ಕರ್ನಾಟಕ ನೀರು ಸರಬರಾಜ ಮತ್ತು ಒಳಚರಂಡಿ ಮಂಡಳಿ ಯಾದಗಿರಿಯ ಅಧಿಕಾರಿಗಳು ಕೃಷ್ಣಾ ನದಿಯ ಕಂಪಾಪುರದ ಕುಡಿಯುವ ನೀರು ಜಾಕ್‌ವೆಲ್‌ಗೆ ಭೇಟಿ ನಿಡಿ ಪರಿಶೀಲಿಸಿದ್ದಾರೆ. ಅಧಿಕಾರಿಗಳ ಆದೇಶದಂತೆ ನದಿಯಲ್ಲಿ ನೀರು ಕ್ಷೀಣಿಸಿದ್ದರಿಂದ ಎರಡು ದಿನಕ್ಕೊಮ್ಮೆ ಬೆಳಗ್ಗೆ 7 ರಿಂದ 10 ಗಂಟೆವರೆಗೆ ನೀರು ಪೂರೈಸಲಾಗುವುದು. ಅತಿಹೆಚ್ಚು ತೊಂದರೆ ಆದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿಗೆ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ನಗರ ನಿವಾಸಿಗಳು ನೀರನ್ನು ವ್ಯರ್ಥ ಮಾಡದೆ ಮಿತವ್ಯಯವಾಗಿ ಬಳಸಬೇಕು.

ಜೀವನ್ ಕಟ್ಟಿಮನಿ, ಪೌರಾಯುಕ್ತ, ಸುರಪುರ

ನದಿಗೆ ನೀರು ಹರಿಸಲು ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರ್‌ಸಿ ಅವರು ನಮಗೆ ಯಾವುದೇ ಆದೇಶ ನೀಡಿಲ್ಲ. ಶೀಘ್ರದಲ್ಲಿ ನಾರಾಯಣಪುರದಲ್ಲಿ ಆಲಮಟ್ಟಿ, ನಾರಾಯಣಪುರ, ಭೀ.ಗುಡಿ, ಆರ್‌ಟಿಪಿಎಸ್ ಎಇಇಗಳೊಂದಿಗೆ ಸಭೆ ನಡೆದು ನದಿಗೆ ನೀರು ಹರಿಸಲು ತೀರ್ಮಾನಿಸಲಾಗುವುದು.

ಅಶೋಕ ರೆಡ್ಡಿ, ಕೆಬಿಜೆನ್ನೆಲ್ ಎಇಇ, ನಾರಾಯಣಪುರ

Share this article