ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯಗಳಾದ ಗಜೇಂದ್ರಗಡ, ಕೊಪ್ಪಳ ಹಾಗೂ ತಾವರಗೇರಾ ರಸ್ತೆ ಪಕ್ಕದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಲೇಔಟ್‌ಗಳಲ್ಲಿ ಪಾರ್ಟಿ ಮಾಡಿ ಬಿಸಾಕಿರುವ ಮದ್ಯದ ಬಾಟಲ ರಾರಾಜಿಸುತ್ತಿವೆ. ಎಲ್ಲೆಂದರಲ್ಲಿ ಬಿದ್ದಿರುವ ಚಿಪ್ಸ್, ಉಪ್ಪಿನಕಾಯಿ ಪ್ಯಾಕೆಟ್, ನೀರಿನ ಬಾಟಲಿ, ಕುಡಿದು ಬಿಸಾಕಿದ ನೀರಿನ ಪೌಚ್‌ಗಳು ಕಾಣ ಸಿಗುತ್ತದೆ.
ಕೆಲವರು ಜನ್ಮದಿನ ಆಚರಣೆ ಇಲ್ಲಿಯೇ ಮಾಡುತ್ತಾರೆ. ಕೆಲ ಲೇಔಟ್‌ಗಳಲ್ಲಿ ಒಂದೆರಡು ಮನೆಗಳು ನಿರ್ಮಾಣವಾಗಿದ್ದು, ಇಂತಹ ವಾತಾವರಣದಿಂದ ಅಲ್ಲಿನ ನಿವಾಸಿಗಳು ಮುಜುಗರಪಟ್ಟುಕೊಳ್ಳುವಂತಾಗಿದೆ.ನಿತ್ಯ ಬೆಳಗ್ಗೆ ಜನರು ವಾಯುವಿಹಾರಕ್ಕೆ ಬರುತ್ತಾರೆ. ಆದರೆ ಲೇಔಟ್‌ನಲ್ಲಿ ಕುಡಿದು ಬಿಸಾಕಿರುವ ಮದ್ಯ ಬಾಟಲಿಗಳು ಕಂಡು ಜನರು ಸ್ಥಳೀಯ ಆಡಳಿತದ ವಿರುದ್ಧ ಶಾಪ ಹಾಕುತ್ತಿದ್ದಾರೆ.
ಲಕ್ಷಾಂತರ ಖರ್ಚು ಮಾಡಿ ನಿರ್ಮಿಸಿದ ಇಂತಹ ಜಾಗ ನಿರ್ವಹಣೆ ಕೊರತೆಯಿಂದ ಈ ರೀತಿ ಆಗುತ್ತಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಲೇಔಟ್ ಮಾಲೀಕರು ಸಂಜೆ ವೇಳೆಯಲ್ಲಿ ನಡೆಯುವ ಇಂತಹ ಚಟುವಟಿಕೆಗೆ ಬ್ರೇಕ್ ಹಾಕಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
ಕುಷ್ಟಗಿಯ ಹೊರವಲಯದಲ್ಲಿನ ಲೇಔಟ್ ರಾತ್ರಿಯ ಸಮಯದಲ್ಲಿ ಮದ್ಯವ್ಯಸನಿಗಳಿಗೆ ಹಾಗೂ ಪಾರ್ಟಿ ಮಾಡುವಂತವರಿಗೆ ಬಹಳಷ್ಟು ಅನುಕೂಲವಾಗಿವೆ. ಪುರಸಭೆ ಅಧಿಕಾರಿ ಮತ್ತು ಲೇಔಟ್ ಮಾಲೀಕರು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಕುಷ್ಟಗಿ ಪಟ್ಟಣದ ನಿವಾಸಿ ಎಚ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.