ಶರಣು ಸೊಲಗಿ ಮುಂಡರಗಿ
ವಾಡಿಕೆಯಷ್ಟು ಮಳೆಯಾಗದ ಕಾರಣ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಾರದೇ ನದಿ ಪಾತ್ರ ಸಂಪೂರ್ಣ ಖಾಲಿಯಾಗಿದೆ, ಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದು, ತಾಲೂಕಿನ ಜನರಿಗೆ ಅದು ಜೀವಜಲವಾಗಿದೆ.ತಾಲೂಕಿನಲ್ಲಿ ಪ್ರತಿ ವರ್ಷ ಜನವರಿ, ಫೆಬ್ರುವರಿ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಾರಂಭದ ಹಿನ್ನೆಲೆ ನೀರಿನ ಸಮಸ್ಯೆ ಕಡಿಮೆಯಾಗಿತ್ತು. ಆದರೆ ಕಳೆದ ವರ್ಷ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗದೇ ಇರುವುದರಿಂದ ನದಿಗೆ ನೀರು ಬರಲಿಲ್ಲ. ಮಲೆನಾಡಿನಲ್ಲಿ ಮಳೆಯಾದ ಸಂದರ್ಭದಲ್ಲಿ ಒಂದಿಷ್ಟು ನೀರು ಬಂದಿತ್ತು. ಅದೇ ನೀರನ್ನು ಇಲ್ಲಿಯವರೆಗೆ ಕುಡಿಯಲು ಬಳಕೆ ಮಾಡಲಾಗುತ್ತಿದೆ. ಆದರೆ ಇದೀಗ ನದಿಯಲ್ಲಿ ನೀರು ಖಾಲಿಯಾಗಿ ಬಹುಗ್ರಾಮ ಯೋಜನೆಗೂ ನೀರು ಇಲ್ಲದಂತಾಗಿದೆ.
ತಾಲೂಕಿನ ಬಹುತೇಕ ಗ್ರಾಮಗಳಿಗೂ ಡಿಬಿಓಟಿ ನೀರು ಸರಬರಾಜು ಮಾಡಲಾಗುತ್ತಿದೆ. ತಾಲೂಕಿನಾದ್ಯಂತ ನಿರ್ಮಾಣ ಮಾಡಲಾಗಿದ್ದ ಸುಮಾರು 88 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಬಿದರಹಳ್ಳಿ, ಮುಂಡವಾಡ, ಹಳ್ಳಿಕೇರಿ, ನಾರಾಯಣಪುರ, ಜಾಲವಾಡಗಿ, ಗಂಗಾಪೂರ, ಚಿಕ್ಕವಡ್ಡಟ್ಟಿ, ಶೀರನಹಳ್ಳಿ, ಗುಡ್ಡದ ಬೂದಿಹಾಳ, ಕೊರ್ಲಹಳ್ಳಿಗಳಲ್ಲಿನ ಘಟಕಗಳು ದುರಸ್ತಿಯಲ್ಲಿವೆ. ಈ ಗ್ರಾಮಗಳಿಗೂ ಡಿಬಿಓಟಿ ನೀರು ಸರಬರಾಜು ಆಗುತ್ತಿರುವುದರಿಂದ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುತ್ತಿಲ್ಲ ಎನ್ನಲಾಗುತ್ತಿದೆ.ಮುಂಡರಗಿ ಪಟ್ಟಣದಲ್ಲಿ ಸುಮಾರು 13 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅಂಬಾಭವಾನಿ ಕಲ್ಯಾಣ ಮಂಟಪದ ಹತ್ತಿರ ಇರುವ ಘಟಕ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದು, ಎಸ್.ಎಸ್. ಪಾಟೀಲ ನಗರದಲ್ಲಿಯೂ ಸ್ಥಗಿತಗೊಂಡಿದೆ. ಹೆಸರೂರು ರಸ್ತೆ ಆಶ್ರಯ ಕಾಲನಿಯಲ್ಲಿ ನೀರಿನ ಘಟಕ ಕಳೆದ 6-7 ದಿನಗಳಿಂದ ಟಿಸಿ ತೊಂದರೆಯಿಂದ ಸ್ಥಗಿತಗೊಂಡಿದೆ, ನೀರು ಸಹ ಸಿಹಿಯಾಗಿರದೇ ಗಡಸು ನೀರೆ ಬರುತ್ತಿದ್ದು, ಇದೀಗ ಬೇಸಿಗೆಯ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ಕೂಡಲೇ ಟಿಸಿ ಸರಿಪಡಿಸುವುದರ ಜತೆಗೆ ನೀರಿನ ಟ್ಯಾಂಕರ್ ಸ್ವಚ್ಛಗೊಳಿಸುವಂತೆ ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.
ಪಟ್ಟಣಕ್ಕೆ ಡಿಬಿಓಟಿಯಿಂದ ಇಲ್ಲಿನ 23 ವಾರ್ಡಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರತಿದಿನ ಸುಮಾರು 80 ಲಕ್ಷ ಲೀಟರ್ ನೀರು ಸರಬರಾಜು ಮಾಡಬೇಕಿದೆ. ಆದರೆ ಇದೀಗ ನೀರು ಕಡಿಮೆ ಇರುವುದುರಿಂದ ನಿತ್ಯ 40 ಲಕ್ಷ ಲೀಟರ್ ನೀರನ್ನು ಮಾತ್ರ ಕೊಡಲಾಗುತ್ತಿದೆ. ಹೀಗಾಗಿ ಈ ಹಿಂದೆ 5 ದಿನಕ್ಕೊಮ್ಮೆ ನದಿ ನೀರು ಬಿಡುತ್ತಿದ್ದ ಪುರಸಭೆ ಇದೀಗ 8-10 ದಿನಗಳಿಗೊಮ್ಮೆ ಬಿಡುತ್ತಿದ್ದಾರೆ. ಬಳಕೆಗಾಗಿ ಪಟ್ಟಣಾದ್ಯಂತ ಅಲ್ಲಲ್ಲಿ ಸುಮಾರು 40 ರಿಂದ 45 ಮೋಟರ್ ಗಳಿದ್ದು ಅವುಗಳಿಂದ ಪ್ರತಿ ಮೂರು ದಿನಗಳಿಗೊಮ್ಮೆ ಬಳಕೆಗಾಗಿ ನೀರು ಬಿಡಲಾಗುತ್ತಿದೆ.ಪಟ್ಟಣದ ಅಂಬಾ ಭವಾನಿ ಕಲ್ಯಾಣ ಮಂಟಪದ ಹತ್ತಿರವಿರುವ ಶುದ್ಧ ನೀರಿನ ಘಟಕವು ಸುಮಾರು ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದು, ಇದೀಗ ಅದನ್ನು ಅವಶ್ಯವಿರುವ ಮತ್ತೊಂದು ವಾರ್ಡಿನಲ್ಲಿ ಸ್ಥಳಾಂತರಿಸಿದರೆ ಬೇಸಿಗೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪಟ್ಟಣದ ಎಸ್.ಎಸ್. ಪಾಟೀಲ ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಯಾವಾಗಲೂ ಕೆಟ್ಟಿರುತ್ತದೆ. ಹೀಗಾಗಿ ನಾವು ಮುಂಡರಗಿ ಪಟ್ಟಣಕ್ಕೆ ಬಂದು ನೀರು ತೆಗೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಅಲ್ಲದೇ ನಮಗೆ ನದಿ ನೀರು ಹಾಗೂ ಬಳಕೆ ನೀರು ಸಹ ನಿಗದಿತ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ನೀರಿನ ಸಮಸ್ಯಗೆ ಪರಿಹಾರ ಮಾಡಬೇಕು ಎಂದು ಎಸ್.ಎಸ್. ಪಾಟೀಲ ನಗರ ನಿವಾಸಿ ಅಡಿವೆಪ್ಪ ಛಲವಾದಿ ಹೇಳಿದರು.ಈಗಾಗಲೇ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟಿದ್ದು, ಕಳೆದ 2-3 ದಿನಗಳಿಂದ ಬ್ಯಾರೇಜ್‌ಗೆ ನೀರು ಹರಿದು ಬರುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ನದಿ ದಡದಲ್ಲಿರುವ ರೈತರ ಪಂಪ್ ಸೆಟ್, ಬೋರವೇಲ್ ಗಳ ವಿದ್ಯುತ್ ಕಡಿತಗೊಳಿಸಲಾಗಿದೆ. ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ತಾಲೂಕಾಡಳಿತ ಕಾರ್ಯ ನಿರ್ವಹಿಸುತ್ತಿದೆ ಮುಂಡರಗಿ ತಹಸೀಲ್ದಾರ ಧನಂಜಯ ಮಾಲಗತ್ತಿ ಹೇಳಿದರು.