ಗದಗ: ವಚನ ಸಾಹಿತ್ಯದ ಸಂರಕ್ಷಣೆಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ವಚನ ಸಾಹಿತ್ಯ ಸಂರಕ್ಷಣಾ ದಿನವು ಪ್ರತಿಯೊಬ್ಬರಿಗೂ ವಚನಗಳ ಮಹತ್ವವನ್ನು ನೆನಪಿಸುತ್ತದೆ. ಹಳಕಟ್ಟಿ ಅವರ ಆದರ್ಶಗಳು ಮತ್ತು ವಚನಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ಜರುಗಿದ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ಪ್ರಯುಕ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕುರಿತು ಪ್ರೌಢಶಾಲಾ ಮತ್ತು ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ಸ್ಪರ್ಧೆ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ತಂಡದವರಿಂದ ನಾಡಗೀತೆ ಪ್ರಸ್ತುತಪಡಿಸಿದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಶರಣ ಸಾಹಿತ್ಯ ಚಿಂತಕ ಬಳಿಗಾರ, ಕರ್ನಾಟಕ ಜನಪದ ಅಕಾಡೆಮಿಯ ಸದಸ್ಯ ಶಂಕರಣ್ಣ ಸಂಕಣ್ಣನವರ, ಎಸ್.ಎನ್. ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು. ಆರ್.ಬಿ. ಚಿನ್ನಿವಾಲರ ನಿರೂಪಿಸಿದರು.