ಶಿರಹಟ್ಟಿ: ಫ.ಗು. ಹಳಕಟ್ಟಿಯವರು ಬಸವಾದಿ ಶರಣರ ವಚನಗಳನ್ನು ಹುಡುಕಿ, ಸಂಪಾದಿಸಿ, ಪ್ರಕಟಿಸಿ, ಕನ್ನಡದ ಅಮೂಲ್ಯ ನಿಧಿ ಪರಿಚಯಿಸಿದ ಮಹಾನ್ ಶಿಲ್ಪಿ ಎಂದು ಗ್ರೇಡ್- ೨ ತಹಸೀಲ್ದಾರ್ ವಿ.ಎ. ಮುಳಗುಂದಮಠ ತಿಳಿಸಿದರು.ಗುರುವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಫ.ಗು. ಹಳಕಟ್ಟಿ ಅವರ ಜನ್ಮದಿನ- ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಫ.ಗು. ಹಳಕಟ್ಟಿ ಅವರು ಕನ್ನಡದ ಸರಸ್ವತ ಲೋಕದ ಅಪ್ರತಿಮ ಸಂಶೋಧಕರು, ವಿದ್ವಾಂಸರು, ವಕೀಲರು ಹಾಗೂ ಸಹಕಾರ ಚಳವಳಿಯ ಪ್ರವರ್ತಕರು ಆಗಿದ್ದರು ಎಂದರು.ಫ.ಗು. ಹಳಕಟ್ಟಿ ಅವರನ್ನು ವಚನ ಪಿತಾಮಹ ಎಂದು ಗೌರವದಿಂದ ಕರೆಯಲಾಗುತ್ತದೆ. ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನಸಾಮಾನ್ಯರಿಗೆ ತಲುಪಿಸಿದ ಅವರ ಸೇವೆ ಅಮೂಲ್ಯವಾಗಿದೆ. ಕನ್ನಡದ ಶರಣರ ವಚನಗಳನ್ನು ವಿವಿಧ ಕಡೆಗಳಿಂದ ಸಂಗ್ರಹಿಸಿ ಉಳಿಸಿದರು. ಸಾವಿರಾರು ವಚನಗಳನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ವಚನ ಸಾಹಿತ್ಯಕ್ಕೆ ಹೊಸ ಜೀವ ತುಂಬಿದರು ಎಂದರು.ಬಸವಣ್ಣ ಹಾಗೂ ಇತರ ಶರಣರ ತತ್ವಗಳನ್ನು ಜನರಿಗೆ ಪರಿಚಯಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ವಚನ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆಗೆ ಭದ್ರ ಅಡಿಪಾಯ ಹಾಕಿದರು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಅಪಾರ ಸೇವೆ ಸಲ್ಲಿಸಿದರು. ಅವರ ಅಸಾಧಾರಣ ಸಾಧನೆಗಾಗಿ ಕನ್ನಡಿಗರು ಅವರನ್ನು "ವಚನ ಪಿತಾಮಹ ಎಂದು ಗೌರವಿಸಿದರು ಎಂದರು.ಶಿರಸ್ತೇದಾರ ಗಿರಿಜಾ ಪೂಜಾರ, ಎಚ್.ಜೆ. ಭಾವಿಕಟ್ಟಿ, ವಿನೋದ ಪಾಟೀಲ, ರಾಧಾ ದೇಸಾಯಪಟ್ಟಿ, ಬಾಬಾಜಾನ ಕೋಳಿವಾಡ, ಶಿವರಾಜ ಜಾಧವ, ಐ.ಎನ್. ಅಡೆವೆನ್ನವರ, ಮಂಜುನಾಥ ಜಾಧವ ಸೇರಿ ಅನೇಕರು ಇದ್ದರು.ನಾಳೆ ಕವನ ಸಂಕಲನ ಬಿಡುಗಡೆ
ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಎಲ್ಲ ಇಲಾಖೆಗಳ ನಿವೃತ್ತ ನೌಕರರು, ಹಿರಿಯರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಿವೃತ್ತ ಶಿಕ್ಷಕ ಷ.ಗು. ಮಾದಾಪುರಮಠ ಅವರ ನಾಲ್ಕನೇ ಕವನ ಸಂಕಲನ "ಮನೋಹಲರಿ " ಜು. ೪ರಂದು ಬೆಳಗ್ಗೆ ೧೦ಕ್ಕೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೧ರಲ್ಲಿ ಲೋಕಾರ್ಪಣೆಗೊಳ್ಳಲಿದೆ.ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬಿ.ಎಸ್. ಈಳಿಗೇರ ಅಧ್ಯಕ್ಷತೆ ವಹಿಸುವರು. ಡಿಡಿಪಿಐ ಆರ್.ಎಸ್. ಬುರುಡಿ ಕವನ ಸಂಕಲನ ಬಿಡುಗಡೆ ಮಾಡುವರು.ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಪುಸ್ತಕ ಪರಿಚಯ ಮಾಡುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ, ಸಾಹಿತಿ ಸಿ.ಜಿ. ಹಿರೇಮಠ, ಪೂರ್ಣಾಜಿ ಖರಾಟೆ, ಕವನ ಸಂಕಲನದ ಲೇಖಕ ಷ.ಗು. ಮಾದಾಪೂರಮಠ, ವಕೀಲ ಬಿ.ಎನ್. ಸಂಶಿ, ವಿ.ಸಿ. ಹಿರೇಮಠ, ಶೋಭಾ ವೀರೇಶ ಹಿರೇಮಠ, ಮುಖ್ಯ ಶಿಕ್ಷಕ ಬಸವರಾಜ ಕುಂಬಾರ, ಡಿ.ಎನ್. ದೊಡ್ಡಮನಿ, ಚಂದ್ರಶೇಖರ ಪಾಟೀಲ, ಕಲಾವಿದ ಪ್ರವೀಣ ಗಾಯಕರ, ಎಸ್.ವಿ. ಅಂಗಡಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.