ಕಂಪ್ಲಿ: ಶರಣ ಸಾಹಿತ್ಯದ ಅಮೂಲ್ಯ ಪರಂಪರೆಯನ್ನು ಸಂಗ್ರಹಿಸಿ, ಸಂಶೋಧನಾ ದೃಷ್ಟಿಯಿಂದ ಜನಸಾಮಾನ್ಯರಿಗೆ ಪರಿಚಯಿಸುವ ಮೂಲಕ ವಚನ ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಷಾ. ಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಾ.ಬಿ.ಸುನಿಲ್ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಜನ್ಮದಿನೋತ್ಸವ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಫ.ಗು.ಹಳಕಟ್ಟಿಯವರ ಜೀವನ ಸಾಧನೆ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ವಿವರಿಸಿದರು.ಫ.ಗು.ಹಳಕಟ್ಟಿಯವರು ಬಸವಣ್ಣ ಸೇರಿದಂತೆ ಶರಣರ ವಚನಗಳು, ಜೀವನ ಚರಿತ್ರೆಗಳು ಹಾಗೂ ಸಂಶೋಧನಾತ್ಮಕ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸುವ ಮೂಲಕ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. ಅವರ ಅವಿರತ ಪರಿಶ್ರಮದಿಂದ ಅನೇಕ ಅಪರೂಪದ ವಚನಗಳು ಉಳಿದುಕೊಂಡಿದ್ದು, ಶರಣರ ತತ್ವ-ಆದರ್ಶಗಳು ಸಮಾಜದಲ್ಲಿ ಇನ್ನಷ್ಟು ವ್ಯಾಪಕವಾಗಿ ಹರಡಲು ಸಾಧ್ಯವಾಯಿತು ಎಂದು ತಿಳಿಸಿದರು.
ವಚನ ಸಾಹಿತ್ಯದ ಪ್ರಸಾರಕ್ಕಾಗಿ ಪತ್ರಿಕೆಗಳನ್ನು ನಡೆಸಿದ ಅವರು, ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಹಿತ್ಯವನ್ನು ಪರಿಣಾಮಕಾರಿ ಸಾಧನವಾಗಿ ಬಳಸಿಕೊಂಡರು. ಶಿಕ್ಷಣದ ವಿಸ್ತರಣೆ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಯನ್ನು ಉದ್ದೇಶಿಸಿ ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಿದರು. ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ ಮತ್ತು ಸಾಹಿತ್ಯದ ಉಳಿವು-ಬೆಳವಣಿಗೆಗಾಗಿ ಜೀವನಪೂರ್ತಿ ಶ್ರಮಿಸಿದ ಅವರು, ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಸಕ್ರಿಯ ಪಾತ್ರವಹಿಸಿದ್ದರು ಎಂದು ಹೇಳಿದರು.ವಚನಗಳು ಕೇವಲ ಸಾಹಿತ್ಯವಲ್ಲ, ಮಾನವೀಯ ಮೌಲ್ಯಗಳನ್ನು ಬೋಧಿಸುವ ಜೀವನದರ್ಶನವಾಗಿವೆ. ಶರಣರ ಸಮಾನತೆ, ಸಹೋದರತೆ, ಶ್ರಮದ ಗೌರವ ಮತ್ತು ಸತ್ಯನಿಷ್ಠೆಯ ಸಂದೇಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಯುವಜನರು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿರಸ್ತೆದಾರ್ ಜಿ. ಪಂಪಾಪತಿ, ಎಸ್.ಡಿ. ರಮೇಶ, ಜಿ. ಪ್ರಕಾಶ್, ಕೆ.ಎಂ. ಹೇಮಯ್ಯಸ್ವಾಮಿ, ಎಸ್.ಡಿ. ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಸಿಬ್ಬಂದಿ ಮಾಲತೇಶ ದೇಶಪಾಂಡೆ, ರಾಧಾ, ಸುರೇಶ್, ವನಿತಾ, ರೂಪಿಣಿ, ಕುಸುಮ, ಶಿಲ್ಪಾ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.