ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ಘೋಷಣೆ ಮಾಡಿರುವ ₹100 ಕೋಟಿ ಅನುದಾನಕ್ಕೆ ಪೂರಕ ಕ್ರಿಯಾಯೋಜನೆ ರೂಪಿಸಿ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸದ್ಬಳಕೆ ಮಾಡಿಕೊಳ್ಳುವಂತೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಶಾಸಕ ಸಮರ್ಥ ಎಂ.ಶಾಮನೂರು ಅವರಿಗೆ ಸಲಹೆ ನೀಡಿದ್ದಾರೆ.
- ದಕ್ಷಿಣ ಕ್ಷೇತ್ರದ ಬಗ್ಗೆ ಹೇಳಿಕೆಯಲ್ಲ, ಕೆಲಸಗಳಾಗಲಿ ಎಂದು ಶಾಸಕರಿಗೆ ಎಸ್‌ಡಿಪಿಐ ಸಲಹೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ಘೋಷಣೆ ಮಾಡಿರುವ ₹100 ಕೋಟಿ ಅನುದಾನಕ್ಕೆ ಪೂರಕ ಕ್ರಿಯಾಯೋಜನೆ ರೂಪಿಸಿ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸದ್ಬಳಕೆ ಮಾಡಿಕೊಳ್ಳುವಂತೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಶಾಸಕ ಸಮರ್ಥ ಎಂ.ಶಾಮನೂರು ಅವರಿಗೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಶಾಸಕರು ಈಚೆಗೆ ಕ್ಷೇತ್ರದ ವಿವಿಧ ಶಾಲೆಗಳಿಗೆ ಭೇಟಿ ನೀಡುತ್ತಿರುವುದು, ಚರಂಡಿಗಳು, ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಿಕೆ ನೀಡುತ್ತಿರುವುದನ್ನು ತಾವು ಗಮನಿಸಿದ್ದು, ಹೇಳಿಕೆಗಳಿಂದ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ, ಕೆಲಸ ಆಗಬೇಕು ಎಂದರು.ಸರ್ಕಾರ ಘೋಷಿಸಿರುವ ₹100 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಿ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಕೆಲಸ ಮಾಡಲಿ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸದ್ಬಳಕೆಯಾಗಲಿ. ಇಲ್ಲದಿದ್ದರೆ, ಬಂದ ಅನುದಾನವೂ ಸರ್ಕಾರಕ್ಕೆ ವಾಪಸಾಗುತ್ತದೆ. ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ, ಕ್ಷೇತ್ರದಲ್ಲಿ ಮಲ್ಟಿ ಸ್ಪೆಷ್ಟಾಲಟಿ ಆಸ್ಪತ್ರೆ ಮಾಡಿ, ಜನರಿಗೆ ಅನುಕೂಲವಾಗುವ ಕೆಲಸ ಮಾಡುವಂತೆ ಅವರು ಹೇಳಿದರು.
ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಎಸ್‌ಡಿಪಿಐ ಸ್ಪರ್ಧಿಸಲಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ದಕ್ಷಿಣ ಕ್ಷೇತ್ರದ ಉಪ ಚುನಾವಣೆ ನಂತರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಜನರಲ್ಲೂ ಎಸ್‌ಡಿಪಿಐ ಬಗ್ಗೆ ಒಲವು ಹೆಚ್ಚುತ್ತಿದ್ದು, ಜನರ ಸ್ಪಂದನೆಯೂ ಉತ್ತಮವಾಗಿದೆ. ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಪ್ರಾಬಲ್ಯ ಹೆಚ್ಚಾಗಿದ್ದು, ಸದ್ಯ ಪಾಲಿಕೆ 45 ವಾರ್ಡ್ ಪೈಕಿ ಅಲ್ಪಸಂಖ್ಯಾತರ ಬಾಹುಳ್ಯದ ವಾರ್ಡ್‌ಗೆ ಸ್ಪರ್ಧಿಸುತ್ತೇವೆ. ಉಳಿದ ವಾರ್ಡ್, ಉತ್ತರದ ಸ್ಪರ್ಧೆ ಬಗ್ಗೆಯೂ ಶೀಘ್ರವೇ ತೀರ್ಮಾನಿಸುತ್ತೇವೆ. ನಮಗಾಗಲೀ, ನಮ್ಮ ಪಕ್ಷಕ್ಕಾಗಲೀ ಗಡಿ, ಕ್ಷೇತ್ರಗಳೆಂಬ ಅಡೆತಡೆಗಳು ಇಲ್ಲ ಎಂದು ಅಪ್ಸರ್ ಕೊಡ್ಲಿಪೇಟೆ ತಿಳಿಸಿದರು.- - -
(ಬಾಕ್ಸ್)* ಸಾಮಾಜಿಕ ಭದ್ರತಾ ಪಿಂಚಣಿ ಆದಾಯ ಮಿತಿ ಹೆಚ್ಚಳಕ್ಕೆ ಸ್ವಾಗತ
- ಬಿಪಿಎಲ್ ಕಾರ್ಡ್‌ಗೆ ₹1.20 ಲಕ್ಷ ಬದಲು ₹3 ಲಕ್ಷಕ್ಕೆ ವಾರ್ಷಿಕ ಆದಾಯ ಮಿತಿ ನಿಗದಿಗೆ ಒತ್ತಾಯದಾವಣಗೆರೆ: ಸಾಮಾಜಿಕ ಭದ್ರತಾ ಪಿಂಚಣಿ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸಿದ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ರಾಜ್ಯ ಸರ್ಕಾರದ ಮುಂದೆ ಎಸ್‌ಡಿಪಿಐ ನಿರಂತರ ಒತ್ತಾಯಿಸುತ್ತಿದ್ದ ಪ್ರಮುಖ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನರ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಹಿಂದೆ ದಶಕಗಳಿಂದಲೂ ಇದ್ದ ವಾರ್ಷಿಕ ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಿಸಿದ್ದು, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ ಎಂದರು.ಕಡಿಮೆ ಆದಾಯ ಮಿತಿ ಕಾರಣಕ್ಕೆ ಪಿಂಚಣಿ ಸೌಲಭ್ಯ ವಂಚಿತರಾಗಿದ್ದ ಸುಮಾರು 2 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರೀಕರು, ವಿಧವೆಯರು, ವಿಕಲಚೇತನರು, ಇತರೆ ದುರ್ಬಲ ವರ್ಗಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಈಚೆಗೆ ಎಸ್‌ಡಿಪಿಐ ಕರ್ನಾಟಕವು ₹32 ಸಾವಿರ ವಾರ್ಷಿಕ ಆದಾಯ ಮಿತಿಯಿಂದಾಗಿ ಈಗಿನ ಜೀವನ ವೆಚ್ಚಕ್ಕೆ ಯಾವುದೇ ರೀತಿ ಹೊಂದಿಕೆ ಆಗುವುದಿಲ್ಲ ಎಂದು ಸರ್ಕಾರದ ಗಮನಕ್ಕೆ ತಂದಿತ್ತು. ಸಾಮಾಜಿಕ ಭದ್ರತಾ ಪಿಂಚಣಿಗೆ ಬಿಪಿಎಲ್ ಮಾನದಂಡ ಅನ್ವಯಿಸಬೇಕು. ಸರ್ಕಾರ ಆದರೆ, ಸಾಮಾಜಿಕ ಭದ್ರತಾ ಪಿಂಚಣಿಗೆ ಪ್ರತ್ಯೇಕ ಆದಾಯ ಮಿತಿ ನಿಗದಿಪಡಿಸುವ ಬದಲು ಬಿಪಿಎಲ್ ಕಾರ್ಡ್ ಅಥವಾ ಆರ್ಥಿಕವಾಗಿ ದುರ್ಬಲ ಕುಟುಂಬವೆಂಬ ಮಾನದಂಡವನ್ನೇ ಅರ್ಹತೆ ಆಧಾರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಅನೇಕ ರಾಜ್ಯಗಳಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗೆ ಬಿಪಿಎಲ್ ಕಾರ್ಡ್, ಕುಟುಂಬದ ಆರ್ಥಿಕ ಸ್ಥಿತಿ ಅಥವಾ ಫ್ಯಾಮಿಲಿ ಐಡಿ ಆಧಾರಿತ ಮಾನದಂಡ ಬಳಸಲಾಗುತ್ತಿದೆ. ಇದೇ ಮಾದರಿ ಅಳವಡಿಸಿಕೊಂಡು, ಪ್ರತ್ಯೇಕ ಆದಾಯ ಪ್ರಮಾಣ ಪತ್ರದ ಅವಶ್ಯಕತೆ ರದ್ದುಪಡಿಸಲಿ. ಬಿಪಿಎಲ್ ಕಾರ್ಡ್‌ಗೆ ಪ್ರಸ್ತುತ ಇರುವ ₹1.20 ಲಕ್ಷ ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದ್ದು, ರಾಜ್ಯ ಸರ್ಕಾರವೂ ಈ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದರು. ₹3 ಲಕ್ಷ ಆದಾಯ ಮಿತಿ ನಿಗದಿಪಡಿಸಿ, ಅದೇ ಮಾನದಂಡ ಸಾಮಾಜಿಕ ಭದ್ರತಾ ಪಿಂಚಣಿಗೂ ಅನ್ವಯಿಸಲಿ ಎಂದು ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದರು.ಪಕ್ಷದ ಜಿಲ್ಲಾಧ್ಯಕ್ಷ ಎ.ಆರ್.ತಾಹೀರ್, ಉಪಾಧ್ಯಕ್ಷ ರಿಯಾಜ್ ರಿಜ್ವಿ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್, ನವೀದ್ ಅಹಮ್ಮದ್, ಅಮೀರ್, ಖುಬೈಬ್, ಯಾಹಿಯಾ, ಜಬೀವುಲ್ಲಾ, ಉಬೇದು ಇತರರು ಇದ್ದರು.
- - --20ಕೆಡಿವಿಜಿ7: ದಾವಣಗೆರೆಯಲ್ಲಿ ಶುಕ್ರವಾರ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.