ಸ್ಲಂ, ಬಡ ಜನರಿಗೆ ವಸತಿ ಹಕ್ಕು ಕಾಯ್ದೆ ಜಾರಿ

KannadaprabhaNewsNetwork | Published : Oct 1, 2024 1:44 AM

ಸಾರಾಂಶ

ಚುನಾವಣಾ ಪೂರ್ವದಲ್ಲಿ ರಾಜ್ಯದ ಬಡ ಜನತೆಗೆ ನೀಡಿದ ಪಂಚ್ ಗ್ಯಾರಂಟಿಗಳನ್ನು ನಾವು ಜಾರಿಗೆ ತಂದಿದ್ದೇವೆ

ಗದಗ: ರಾಜ್ಯದಲ್ಲಿ ಈಗಾಗಲೇ ಸ್ಲಂ ಮತ್ತು ಬಡ ಜನರಿಗೆ ವಸತಿ ಹಕ್ಕು ಕಾಯ್ದೆ ಜಾರಿಗೆ ತರಲು ಎಲ್ಲ ಸಿದ್ಧತೆ ನಡೆಸಿದ್ದು, ಕಾಂಗ್ರೆಸ್‌ ಸರ್ಕಾರದಿಂದ ವಸತಿ ಹಕ್ಕನ್ನು ಮೂಭೂತ ಹಕ್ಕಾಗಿ ಜಾರಿಗೆ ತರಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ನಗರದ ಡಾ. ಬಾಬು ಜಗಜೀವನರಾಂ ಕಲ್ಯಾಣ ಮಂಟಪದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಜಿಲ್ಲಾ ಸ್ಲಂ ಸಮಿತಿಯಿಂದ ನಡೆದ ಶ್ರಮಜೀವಿಗಳ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಲಂ ಜನರ ವಸತಿ ಮತ್ತು ಕೊಳಗೇರಿಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರದಿಂದ ಸಾಕಷ್ಟು ಅನುದಾನ ನೀಡಿದ್ದೇವೆ. ಸ್ಲಂ ಪ್ರದೇಶದ ಕುಟುಂಬಗಳಿಗೆ ಭೂ ಮಾಲಿಕತ್ವ ನೀಡುವ ಉದ್ದೇಶದಿಂದ 3.52 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ರಾಜ್ಯದ ಸ್ಲಂ ನಿವಾಸಿಗಳ ಭೂ ಮಾಲಿಕತ್ವ ಸಿಗುತ್ತಿದೆ ಎಂದರು.

ನಮ್ಮ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಚುನಾವಣಾ ಪೂರ್ವದಲ್ಲಿ ರಾಜ್ಯದ ಬಡ ಜನತೆಗೆ ನೀಡಿದ ಪಂಚ್ ಗ್ಯಾರಂಟಿಗಳನ್ನು ನಾವು ಜಾರಿಗೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಅಸಂಘಟಿತ ಕಾರ್ಮಿಕರ ಪರವಾಗಿ ಕಲ್ಯಾಣ ಮಂಡಳಿ ಜಾರಿಗೆ ತಂದು ಸಾಮಾಜಿಕ ಭದ್ರತೆ ನೀಡುವ ಮೂಲಕ ಶ್ರಮಜೀವಿಗಳ ಸ್ವಾಭಿಮಾನ ಎತ್ತ ಹಿಡಿಯುವ ಕೆಲಸ ಸರ್ಕಾರ ಮಾಡುತ್ತದೆ. ನಗರಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲ ಶ್ರಮಜೀವಿಗಳು ನೀಡುತ್ತಿರುವುದ್ದರಿಂದ ದೇಶ ವಿಶ್ವ ಗುರು ಆಗಲು ಸಾಧ್ಯವಾಗುತ್ತಿದೆ. ರಾಜ್ಯದಲ್ಲಿ ಹೊಸ ಸ್ಲಂ ಕಾಯ್ದೆ ಮತ್ತು ಹೊಸ ಕ್ರಿಮಿನಲ್ ಕಾಯ್ದೆ ಜನರಪರವಾಗಿ ರಚಿಸಲಾಗುವುದೆಂದು ತಿಳಿಸಿದರು.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ, ಸರ್ಕಾರ ಬಡಜನರ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸಬೇಕು. ಪಂಚ ಗ್ಯಾರಂಟಿಗಳ ಜತೆಯಲ್ಲಿ ಸ್ಲಂ ಜನರಿಗೆ ವಸತಿ ಯೋಜನೆಗೆ ₹ 6200 ಕೋಟಿ ಕಾಂಗ್ರೆಸ್‌ ಸರ್ಕಾರ ನೀಡುವ ಮೂಲಕ 6ನೇ ಗ್ಯಾರಂಟಿ ನೀಡಿದೆ ಎಂದರು.

ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ. ಆರ್.ಮಾನ್ವಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್‌ ಬಬರ್ಚಿ, ಅಶೋಕ ಕುಡತಿನ್ನಿ, ಜರ್ನಾದನ ಹಳ್ಳಿಬೆಂಚಿ, ಶೋಭಾ ಕಮತರ, ವೆಂಕಟೇಶಯ್ಯ, ಪ್ರಭು ಬುರಬುರೆ, ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೆಹರುನಿಸಾ ಡಂಬಳ, ದುರ್ಗಪ್ಪ ನವಲಗುಂದ, ಎಸ್.ಎನ್.ಬಳ್ಳಾರಿ, ಬಸವರಾಜ ಕಡೇಮನಿ ಇದ್ದರು.30ಜಿಡಿಜಿ11

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಿದರು.

Share this article