ಹೃದಯ ಸಂಬಂಧಿ ಕಾಯಿಲೆಗಳ ಹತೋಟಿಗೆ ಶ್ರಮಿಸಿ

KannadaprabhaNewsNetwork | Updated : Oct 01 2024, 01:44 AM IST

ಸಾರಾಂಶ

ಯುವ ಜನರೆ ಹೆಚ್ಚಿನ ಸಂಖ್ಯೆಯಲ್ಲಿ ಹಠಾತ್ತಾಗಿ ಹೃದಯಾಘಾತ, ಹೃದಯಸ್ತಂಭನಕ್ಕೀಡಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ

ಗದಗ: ವಿಶ್ವ ಹೃದಯ ದಿನವನ್ನು ಪರಿಣಾಮಕಾರಿಯಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಿದೆ. ಕೋವಿಡ್ ಗಂಡಾಂತರದ ನಂತರ ಹೃದಯ ಸಂಬಂಧಿ ಕಾಯಿಲೆಗಳು ಗಣನೀಯವಾಗಿ ಹೆಚ್ಚಾಗಿದ್ದು, ಅವುಗಳ ಹತೋಟಿಗೆ ಶ್ರಮಿಸಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಿ.ಸಿ. ಕರಿಗೌಡರ ಹೇಳಿದರು.

ನಗರದ ಜಿಮ್ಸ್ ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗದ ಆಶ್ರಯದಲ್ಲಿ ನಡೆದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸಂಗಮೇಶ ಅಸೂಟಿ ಮಾತನಾಡಿ, ಆಧುನಿಕ ಜೀವನ ಶೈಲಿ, ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಆರೋಗ್ಯದ ಬಗ್ಗೆ ನಿರ್ಲಕ್ಷ್ಯಇವೆಲ್ಲ ಕಾರಣಗಳಿಂದಾಗಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಕರೋನಾ ಆನಂತರ ದಿನಗಳಲ್ಲಿ ಹೃದ್ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯುವ ಜನರೆ ಹೆಚ್ಚಿನ ಸಂಖ್ಯೆಯಲ್ಲಿ ಹಠಾತ್ತಾಗಿ ಹೃದಯಾಘಾತ, ಹೃದಯಸ್ತಂಭನಕ್ಕೀಡಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೃದ್ರೋಗಗಳಿಂದ ಉಂಟಾಗುತ್ತಿರುವ ಜೀವ ಹಾನಿ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪುನೀತ್‌ ರಾಜ್‌ಕುಮಾರ ಹೃದಯ ಜ್ಯೋತಿ ಹಾಗೂ ಮುಂತಾದ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಮಾತನಾಡಿ, ''''ಚಟುವಟಿಕೆಗೆ ಹೃದಯವನ್ನು ಬಳಸಿ'''' ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಹೃದಯ ದಿನವನ್ನು ಆಚರಿಸುತ್ತಿದ್ದೇವೆ. ಹೃದಯ ಆರೋಗ್ಯವಾಗಿಡಲು ಬೆಳಗಿನ ಅಥವಾ ಸಂಜೆಯ ನಡೆಗೆ ಸಹಾಯಕಾರಿ ಎಂದರು.

ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಕರಿಗೌಡರ ಮಾತನಾಡಿ, ನಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಪ್ರತಿದಿನ ವ್ಯಾಯಾಮ, ಯೋಗಾಸನ, ಪೌಷ್ಟಿಕ ಆಹಾರ ಸೇವಿಸಬೇಕು. ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 7ರಿಂದ 8 ಗಂಟೆ ವರೆಗೆ ಆರೋಗ್ಯಕರ ನಿದ್ರೆ ಅವಶ್ಯಕ ಎಂದು ಹೇಳಿದರು.

ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಆರೇರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ನರ್ಸಿಂಗ್ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಇದ್ದರು. ಎಂ.ಎಸ್. ರಬ್ಬನಗೌಡ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share this article