-ಸಾಣೇಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
-------ಕನ್ನಡಪ್ರಭ ವಾರ್ತೆ ಹೊಸದುರ್ಗ
ಮಕ್ಕಳು ತಮ್ಮಲ್ಲಿ ಅಡಗಿರುವ ಶಕ್ತಿ ಸಾಮರ್ಥ್ಯ ಹೊರಹೊಮ್ಮಿಸಬೇಕು ಎನ್ನುವ ಅಭೀಪ್ಸೆ ಹೊಂದಿರುತ್ತಾರೆ, ಅದಕ್ಕೆ ಪೂರಕವಾದ ವಾತಾವರಣ ಸಿಕ್ಕರೆ ಆ ಮಗು ಅಭಿವೃದ್ಧಿ ಹೊಂದಲಿಕ್ಕೆ ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ಸಾಣೇಹಳ್ಳಿಯ ಶಿವಕುಮಾರ ರಂಗಮಂದಿರಲ್ಲಿ ನಡೆದ ಸಾಣೇಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವ ಮಕ್ಕಳೂ ಪ್ರತಿಭಾಹೀನರಲ್ಲ. ಎಲ್ಲ ಮಕ್ಕಳಲ್ಲೂ ಪ್ರತಿಭೆ ಅವ್ಯಕ್ತವಾಗಿರುತ್ತದೆ. ಅದನ್ನು ಪ್ರತಿಭಾ ಕಾರಂಜಿಯ ಮೂಲಕ ವ್ಯಕ್ತಪಡಿಸುವಂಥ ಕೆಲಸ ಮನೆಯಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ ನಡೆಯಬೇಕು ಎಂದರು.
ಮಕ್ಕಳನ್ನು ಪ್ರತಿಭಾಹೀನರೆಂದು ಅವಹೇಳನ ಮಾಡದೇ ಆ ಮಕ್ಕಳ ಮನೋಭೂಮಿಕೆಯಲ್ಲಿ ಬಿತ್ತುವ ಕಾರ್ಯವನ್ನು ಆಯಾ ಶಾಲೆಯ ಶಿಕ್ಷಕರು ಮಾಡಬೇಕಾಗುತ್ತದೆ. ಒಂದೊಂದು ಸಾರಿ ಪ್ರತಿಭಾವಂತರಿಗೆ ಎಲ್ಲ ಅವಕಾಶಗಳನ್ನು ಕೊಟ್ಟು ಉಳಿದವರಿಗೆ ಹಿಂದೆ ತಳ್ಳುವ ಕೆಲಸ ಆಗುತ್ತದೆ. ನಾವು ಬಯಸುವಂಥದ್ದು ಯಾವ ಮಗುವಿನಲ್ಲಿ ಪ್ರತಿಭೆ ಇಲ್ಲ, ಅಂತ ಅಂದುಕೊಂಡು ದೂರ ತಳ್ಳುವಿರೋ ಆ ಮಗುವಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಪ್ರೋತ್ಸಾಹವನ್ನು ನೀಡಬೇಕು. ಆ ಮಗುವಿನ ಭಾವನೆಗಳನ್ನು ಅರಳಿಸುತ್ತಾ ಹೋಗಬೇಕು. ಆಗ ಆ ಮಗು ಪ್ರತಿಭಾವಂತನಾಗಿ ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ವಿಚಾರ ಬಿತ್ತುತಾ ಹೋದರೆ ಕ್ರಮೇಣ ಅವು ಸತ್ಫಲ ನೀಡಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯ.
ಜಗತ್ತಿನ ಚರಾಚರದಲ್ಲೂ ಚೇತನ ಅಡಗಿದೆ. ಅದರಲ್ಲೂ ಮಾನವನಲ್ಲಿ ಬೇರೆಲ್ಲವುಗಳಿಗಿಂತ ಅದ್ಭುತವಾದ ಚೈತನ್ಯ ಅಡಗಿದೆ. ಯಾರಲ್ಲಿ ಎಂಥ ಪ್ರತಿಭೆ ಅಡಗಿದೆ ಎನ್ನುವಂಥದ್ದನ್ನು ತಿಳಿಯುವ ವಿವೇಕ, ಜಾಣ್ಮೆ ದೊಡ್ಡವರಿಗಿರಬೇಕು. ಕೆಲ ಮಕ್ಕಳು ಆಟ, ಹಾಡು, ಓದು, ನೃತ್ಯ, ನಾಟಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುತ್ತಾರೆ. ಈ ದೃಷ್ಟಿಯಲ್ಲಿ ಕ್ಲಸ್ಟರ್ ಹಂತದಲ್ಲಿ ನಡೆಯುತ್ತಿರುವ ಈ ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆ ಕಲ್ಪಿಸಿದೆ ಎಂದರು.ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುರೇಶ್, ಸಹಶಿಕ್ಷಕ ಯೋಗರಾಜ್ ಹೆಚ್ ಸಿ, ಮುಖ್ಯಶಿಕ್ಷಕ ಬಸವರಾಜ್ ಕೆ ಆರ್ ಮಾತನಾಡಿದರು.
ವಿದ್ಯಾರ್ಥಿಗಳಾದ ಜನ್ಯತಾ, ಚಾರುಪ್ರಿಯ, ಚಾರ್ವಿ ಪ್ರಾರ್ಥನೆ ನಡೆಸಿಕೊಟ್ಟರು. ಪ್ರಭು ಬಿ ಎಸ್ ಸ್ವಾಗತಿಸಿದರೆ ಕವಿತ ಎಸ್ ಹೆಚ್ ನಿರೂಪಿಸಿ ವಂದಿಸಿದರು.ವೇದಿಕೆಯ ಮೇಲೆ ಶಿಕ್ಷಣ ಸಂಯೋಜಕ ಶಶಿಧರ ಎಂ, ಮುಖ್ಯೋಪಾಧ್ಯಾಯರಾದ ಶಿವಕುಮಾರ ಬಿ ಎಸ್, ಶಿಲ್ಪ ಎ ಎಸ್ ಉಪಸ್ಥಿತರಿದ್ದರು.
-------ಫೋಟೋ: 7hsd1:
ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಮಕ್ಕಳು ಉದ್ಘಾಟಿಸಿದರು.