ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ದೇಶದ ಸಂಸ್ಕೃತಿ, ಆಚಾರ ವಿಚಾರ, ಉತ್ತಮ ಸಂಸ್ಕಾರ ಜೊತೆಗೆ ದೇಶಾಭಿಮಾನ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹೇಳಿದರು.ತಾಲೂಕಿನ ಬಳವಾಟ ಗ್ರಾಮದ ಕಂಠಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಿರೇಮಠ ಪರ್ವತಾಶ್ರಮ ಸಹಯೋಗದಲ್ಲಿ ಡಾ.ಸೋಮಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸದಾನಂದ ಶಿವಾಚಾರ್ಯರ 3ನೇ ಸ್ಮರಣೋತ್ಸವದ ಧರ್ಮಸಭೆ ಹಾಗೂ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಆಧುನಿಕ ಮತ್ತು ವೈಜ್ಞಾನಿಕ ಯುಗದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆಯಿಂದಾಗಿ ನಿಜವಾದ ಭಾರತೀಯ ಸಂಸ್ಕೃತಿಯೇ ಮರೆಯುತ್ತಿದ್ದೇವೆ. ಈ ಕಾಲಘಟ್ಟದಲ್ಲಿ ಮಹಿಳೆಯವರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ. ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ರಾಜ್ಯದಲ್ಲಿ ಬಸವಾದಿ ಹಲವಾರು ಶರಣರು, ಸಂತರು, ಅನೇಕ ಪವಾಡಗಳನ್ನು ನಡೆಸುವ ಮೂಲಕ ಧರ್ಮ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು. ಇದರಿಂದಲೇ ಶರಣರು ನಾಡಿನಲ್ಲಿ ಸಮಾನತೆಯ ಸಂದೇಶ ಸಾರಿದ್ದಾರೆ. ಅದರಂತೆ ಮಠ ಮಾನ್ಯಗಳು ಸಂಸ್ಕಾರ ಮತ್ತು ಪರಂಪರೆ ಸೇರಿದಂತೆ ಧರ್ಮವನ್ನು ಉಳಿಸುವಲ್ಲಿ ನಿಟ್ಟಿನಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ನಾವೆಲ್ಲ ಮಹಾನ್ ಶರಣರ ಪವಾಡಪುರುಷರ ಮಠಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನವನ್ನು ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ತಮ್ಮ ಜೀವನದಲ್ಲಿ ನೈತಿಕತೆಯನ್ನು ಮೈಗೂಡಿಸಿಕೊಂಡರೆ ಅತ್ಯುತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಆಶೀರ್ವಚನವನ್ನು ನೀಡಿದರು.ಕಾರ್ಯಕ್ರಮದ ಹಿನ್ನಲೆಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಡಾ.ಸೋಮಶೇಖರ ಶಿವಾಚಾರ್ಯರು, ಮಲ್ಲಯ್ಯ ಹಿರೇಮಠ, ಗುಡಿಹಾಳದ ಶ್ರೀಶೈಲ ಹಿರೇಮಠ, ಶ್ರೀ ಬಸಲಿಂಗಯ್ಯಾ ಹಿರೇಮಠ, ಸಿದ್ದನಗೌಡ ಬಿರಾದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸನಗೌಡ ಸಾಸನೂರ, ವಿವೇಕಾನಂದ ಬಿರಾದಾರ, ಹಣಮಂತ ಭಜಂತ್ರಿ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಹವಹಿಸಿದ್ದರು.ಇಂದಿನ ಆಧುನಿಕ ಮತ್ತು ವೈಜ್ಞಾನಿಕ ಯುಗದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆಯಿಂದಾಗಿ ನಿಜವಾದ ಭಾರತೀಯ ಸಂಸ್ಕೃತಿಯೇ ಮರೆಯುತ್ತಿದ್ದೇವೆ. ಈ ಕಾಲಘಟ್ಟದಲ್ಲಿ ಮಹಿಳೆಯವರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ. ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ.
ಸಿ.ಬಿ.ಅಸ್ಕಿ, ಕಾಂಗ್ರೆಸ್ ಮುಖಂಡರು.