ಕನ್ನಡದ ಜತೆ ಉಪ ಭಾಷೆಗಳಿಗೂ ಪ್ರೋತ್ಸಾಹ ನೀಡಿ : ಡಾ. ಮಂತರ್ ಗೌಡ

KannadaprabhaNewsNetwork |  
Published : Nov 22, 2026, 02:30 AM IST
ಚಿತ್ರ : 21ಎಂಡಿಕೆ3 : ಕಾರ್ಯಕ್ರಮದ ಉದ್ಘಾಟನೆ.  | Kannada Prabha

ಸಾರಾಂಶ

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಿರಂತರವಾಗಿ ನಡೆಯಬೇಕು. ಕನ್ನಡ ಭಾಷೆಯ ರಕ್ಷಣೆಗೆ ಎಷ್ಟು ಆದ್ಯತೆ ನೀಡುತ್ತೇವೆಯೋ, ಅದೇ ರೀತಿ ಇತರ ಕನ್ನಡ ಉಪ ಭಾಷೆಗಳ ಬೆಳವಣಿಗೆಗೂ ಪ್ರೋತ್ಸಾಹ ನೀಡಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಹೇಳಿದರು.

ಮಡಿಕೇರಿ : ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಿರಂತರವಾಗಿ ನಡೆಯಬೇಕು. ಕನ್ನಡ ಭಾಷೆಯ ರಕ್ಷಣೆಗೆ ಎಷ್ಟು ಆದ್ಯತೆ ನೀಡುತ್ತೇವೆಯೋ, ಅದೇ ರೀತಿ ಇತರ ಕನ್ನಡ ಉಪ ಭಾಷೆಗಳ ಬೆಳವಣಿಗೆಗೂ ಪ್ರೋತ್ಸಾಹ ನೀಡಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕ.ಸಾ.ಪ, ಮೂರ್ನಾಡು ಹೋಬಳಿ ಘಟಕ, ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರಗೋಡು ಹಾಗೂ ಮೂರ್ನಾಡು ಹೋಬಳಿ ಘಟಕದ ವಿವಿಧ ಸಂಘ ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಶನಿವಾರ ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮೂರ್ನಾಡು ಹೋಬಳಿ ಘಟಕದ 3ನೇ ವರ್ಷದ 71ನೇ ಕನ್ನಡ ರಾಜ್ಯೋತ್ಸವ "ಕನ್ನಡ ಹಬ್ಬ "ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಮಾತನಾಡಲು ಹಾಗೂ ಭಾಷೆಯನ್ನು ಉಳಿಸಲು ದೊರೆಯುವ ಯಾವುದೇ ಅವಕಾಶವನ್ನು ಕೈಬಿಡಬಾರದು. ನಮ್ಮವರು ದೇಶದ ಯಾವುದೇ ಭಾಗಕ್ಕೆ ಅಥವಾ ವಿದೇಶಕ್ಕೆ ತೆರಳಿದರೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಕನ್ನಡಾಭಿಮಾನ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ, ವರ್ಷದ ಪ್ರತಿದಿನವೂ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ನಿರಂತರವಾಗಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಪರಿಚಯ ಮಾಡಿಕೊಡಬೇಕು ಎಂದು ಹೇಳಿದರು.ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ, ಕನ್ನಡ ಎಲ್ಲರ ಹೃದಯದ ಭಾಷೆಯಾಗಿದೆ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ವಿಶ್ವದಲ್ಲಿ ಅನೇಕ ಭಾಷೆಗಳು ಕಣ್ಮರೆಯಾಗಿವೆ. ಅದೇ ರೀತಿ ಕನ್ನಡ ಭಾಷೆಯೂ ಆತಂಕವನ್ನು ಎದುರಿಸುತ್ತಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ಸಾಹಿತಿಗಳು ಹಾಗೂ ಸಾಹಿತ್ಯದ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವುದು ಸ್ವಾಗತಾರ್ಹ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು, ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಅಸ್ಮಿತೆಯ ಪ್ರತೀಕವಾಗಿದೆ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕನ್ನಡವನ್ನು ಕೇವಲ ಕನ್ನಡ ರಾಜ್ಯೋತ್ಸವದ ದಿನಕ್ಕೆ ಸೀಮಿತಗೊಳಿಸದೆ, ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.ಸಮಾಜ ಸೇವಕ ಅವರೆಮಾದಂಡ ಶರತ್ ಪೂಣಚ್ಚ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತ ಶಯನ, ಸಮಾಜ ಸೇವಕ ಹರಪಳ್ಳಿ ರವೀಂದ್ರ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಮೂರ್ನಾಡು ಹೋಬಳಿಯ ಪ್ರತಿಯೊಂದು ಗ್ರಾಮಕ್ಕೂ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್, ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್, ಎಸ್.ಎಸ್.ಸಂಪತ್ ಕುಮಾರ್, ರೇವತಿ ರಮೇಶ್, ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ತಾ.ಪಂ.ಇಒ ಶೇಖರ್, ಮಾಜಿ ಸದಸ್ಯ ಆನಂದ ರಘು, ಹೊಸ್ಕೇರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ.ಅಬ್ದುಲ್ಲ, ಹಾಕತ್ತೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಂಜಲಿ, ಹೊದ್ದೂರು ಪಂಚಾಯಿತಿ ಅಧಿಕಾರಿ ವತ್ಸಲಾಕುಮಾರಿ ಪ್ರಮುಖರಾದ ಕಾಂಗೀರ ಸತೀಶ್, ಕೃಷ್ಣರಾಜ್, ಶೋಭಾರಾಣಿ, ಬಿದ್ರುಪಣೆ ಬಸಪ್ಪ, ಸಮಿತಿ ಪದಾಧಿಕಾರಿಗಳು ಇದ್ದರು.ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 26 ಸಾಧಕರು, ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. "ಕನ್ನಡ ಸಿರಿ "ಸ್ಮರಣ ಸಂಚಿಕೆಯ ಮುಖಪುಟ, ಸಾಹಿತಿ ಕಿಗ್ಗಲು ಗಿರೀಶ್ ಅವರು ಬರೆದ "ನಾಪತ್ತೆಯಾದ ನಿವ್ಯಾವತಿ " ಪುಸ್ತಕ ಬಿಡುಗಡೆ ಮಾಡಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ,.ಕೇಶವಕಾಮತ್ ರಾಷ್ಟ್ರ ಧ್ವಜ, ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ನಾಡ ಧ್ವಜಾರೋಹಣ ಮಾಡಿದರು.ಮೂರ್ನಾಡು ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಮೂರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ರೈತಗೀತೆ ಹಾಡಿದರು. ಕಸಾಪ ಪ್ರತಿನಿಧಿಗಳಾದ ಮೀನಾಕ್ಷಿ ಕೇಶವ್ ಸ್ವಾಗತಿಸಿದರು, ತೇಜಸ್ ಪ್ರಸಾದ್, ಕಟ್ಟೆಮನೆ ಸೋನಜಿತ್, ಮಾಳಿಗೆ ಮನೆ ವೆಂಕಟೇಶ್, ಬಿದ್ರುಪಣೆ ದೀಪಿಕಾ, ಕಲ್ಲುಮುಟ್ಲು ಜಶ್ಮಿ, ಪರಿಚನ ಸೋನಿ ನಿರೂಪಿಸಿದರು. ಕೊಂಪುಳೀರ ಮಮತ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಪೊಟ್ಟನ್ ದೇವರ ನೂತನ ಗುಡಿಗೆ ಭೂಮಿ ಪೂಜೆ
ಸರ್ವೇ ಇಲಾಖೆಗೆ ಲೋಕಾಯುಕ್ತ ದಿಢೀರ್ ದಾಳಿ: ಪರಿಶೀಲನೆ