ಸಭೆಗೆ ಗೈರು ಹಾಜರಾದ ಅಧಿಕಾರಿಗಳ ಮೇಲೆ ಗರಂ ಆದ ದೇಶಪಾಂಡೆ, ಪ್ರತಿಯೊಬ್ಬ ಅಧಿಕಾರಿಯೂ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ನೆಲೆಸಬೇಕು. ಯಾರೂ ಇರುವುದಿಲ್ಲವೋ ಅವರನ್ನು ಅಮಾನತು ಮಾಡುತ್ತೇನೆ ಎಂದು ಗುಡುಗಿದರು.
ಹಳಿಯಾಳ: ಸರ್ಕಾರಿ ಕಚೇರಿಗಳಿಗೆ ಜನರನ್ನು ಅಲೆದಾಡಿಸದೆ, ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವ ಮೂಲಕ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರಜಾಸೇವಾ ಆಂದೋಲನವನ್ನು ಆರಂಭಿಸಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಶನಿವಾರ ತಾಲೂಕಿನ ತೇರಗಾಂವ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜನರ ಸಮಸ್ಯೆಗಳನ್ನು ಪರಿಹರಿಸುವುದು, ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು ಮತ್ತು ಜನರಲ್ಲಿ ಸಾಮಾಜಿಕ ಹಾಗೂ ಆಡಳಿತಾತ್ಮಕ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿರುವ ಆಡಳಿತಾತ್ಮಕ ಕ್ರಾಂತಿಕಾರಕ ಹೆಜ್ಜೆ ಇದಾಗಿದ್ದು, ಇದರ ಸದುಪಯೋಗವನ್ನು ಸರ್ವರೂ ಪಡೆಯಬೇಕು ಎಂದರು.
ಅಧಿಕಾರಿಗಳಿಗೆ ತರಾಟೆ: ಸಭೆಗೆ ಗೈರು ಹಾಜರಾದ ಅಧಿಕಾರಿಗಳ ಮೇಲೆ ಗರಂ ಆದ ದೇಶಪಾಂಡೆ, ಪ್ರತಿಯೊಬ್ಬ ಅಧಿಕಾರಿಯೂ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ನೆಲೆಸಬೇಕು. ಯಾರೂ ಇರುವುದಿಲ್ಲವೋ ಅವರನ್ನು ಅಮಾನತು ಮಾಡುತ್ತೇನೆ ಎಂದು ಗುಡುಗಿದರು.
ಅಹವಾಲುಗಳನ್ನು ಆಲಿಸುತ್ತಲೇ, ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದ ಅಧಿಕಾರಿಗಳ ಬೆವರಿಳಿಸಿದ ದೇಶಪಾಂಡೆ, ಉಡಾಫೆ ಉತ್ತರ ನೀಡಿದ ಪಿಡಿಒ ಅವರಿಗೆ ಸಭೆಯಲ್ಲಿ ತಪ್ಪೊಪ್ಪಿಕೊಳ್ಳಲು ಸೂಚಿಸಿದರು.
ಮಕ್ಕಳನ್ನು ಶಾಲೆಗೆ ಹೋಗುವಾಗ ಹಾಗೂ ಮನೆಗೆ ಹಿಂದಿರುಗುವಾಗ ಸಾರಿಗೆ ಸಂಸ್ಥೆಯವರು ಕಡ್ಡಾಯವಾಗಿ ಬಸ್ ನಿಲ್ಲಿಸಿ ಹತ್ತಿಸಿಕೊಂಡು ಬರಬೇಕೆಂದು ಶಾಸಕರು ಹಳಿಯಾಳ ಡಿಪೋ ವ್ಯವಸ್ಥಾಪಕರಿಗೆ ತಾಕೀತು ಮಾಡಿದರು.
ಗೋಶಾಲೆ ಮೇವಿನ ವಿಷಯದಲ್ಲಿ ತರಾಟೆ: ದುಸಗಿ ಗ್ರಾಮದಲ್ಲಿನ ಗೋಶಾಲೆಗೆ ಮೇವಿನ ಕೊರತೆಯಾಗಿದೆ ಎಂದು ಕಬ್ಬು ಬೆಳೆಗಾರರ ಮುಖಂಡ ಶಂಕರ ಕಾಜಗಾರ ಶಾಸಕರನ್ನು ಪ್ರಶ್ನಿಸಿದರು. ಮೇವಿನ ಕೊರತೆ ಎಂದು ಕೇಳಿದೊಡನೆಯೇ ಕೆಂಡಾಮಂಡಲರಾದ ಶಾಸಕರು, ಜಿಲ್ಲೆಯ ಏಕೈಕ ಗೋಶಾಲೆ ಇದು. ಇಲ್ಲಿ 205 ಜಾನುವಾರುಗಳಿವೆ. ನಾನು ಪ್ರತಿ ಬಾರಿಯೂ ತಾಲೂಕಿನ ರೈತರಲ್ಲಿ ಹಾಗೂ ಸ್ಥಿತಿವಂತರಲ್ಲಿ ಗೋಶಾಲೆಗೆ ಮೇವನ್ನು ದಾನವಾಗಿ ನೀಡಲು ಮನವಿ ಮಾಡುತ್ತಿದ್ದೇನೆ. ಆದರೆ ಯಾರೂ ಸ್ಪಂದಿಸುತ್ತಿಲ್ಲ ಎಂದರು. ಸಮಸ್ಯೆಗಳನ್ನು ಪ್ರಸ್ತಾಪಿಸುವವರು ತಾವೇ ಮೊದಲು ಖುದ್ದಾಗಿ ಮೇವನ್ನು ದಾನವಾಗಿ ನೀಡಿದರೆ ಉತ್ತಮವಾಗಿತ್ತು ಎಂದು ಮಾತಿನಿಂದ ತಿವಿದರು.
ಹಲವು ಸಮಸ್ಯೆಗಳ ಪ್ರಸ್ತಾಪ: ತೇರಗಾಂವದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಅಭಿವೃದ್ಧಿ ಸೇರಿದಂತೆ ಸಮಾಜದ ಅಭಿವೃದ್ಧಿ, ಸಾರಿಗೆ, ಕೌಟುಂಬಿಕ ಸಮಸ್ಯೆ, ಆಶ್ರಯ, ಶಿಕ್ಷಣ, ಕೃಷಿ, ನೀರಾವರಿ, ಆರೋಗ್ಯ, ಅಪಘಾತ ಪರಿಹಾರ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪ್ರಸ್ತಾಪ ಹಾಗೂ ಚರ್ಚೆ ನಡೆದು ಪರಿಹಾರವನ್ನು ಸಹ ಕಂಡುಕೊಳ್ಳಲಾಯಿತು. ಕೆಲವು ಫಲಾನುಭವಿಗಳಿಗೆ ಸಭೆಯಲ್ಲಿಯೇ ಮಾಸಾಶನ ಸೇರಿದಂತೆ ಇತರ ವೃದ್ಧಾಪ್ಯ ವೇತನ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಸೊಸೆ ನೋಡುತ್ತಿಲ್ಲ ಎಂಬ ಅರ್ಜಿ: ನನ್ನನ್ನು ಸೊಸೆಯು ಸರಿಯಾಗಿ ನೋಡುತ್ತಿಲ್ಲ ಎಂಬ ಅರ್ಜಿಯೊಂದು ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟಿತ್ತು. ಅರ್ಜಿ ಸಲ್ಲಿಸಿದ ನೊಂದವರು ಸಭೆಗೆ ಆಗಮಿಸಿರಲಿಲ್ಲ. ಇದನ್ನು ಗಮನಿಸಿದ ಶಾಸಕರು ಸಿಡಿಪಿಒ ಅವರಿಗೆ ಅರ್ಜಿದಾರರ ಕುಟುಂಬಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ವಹಿಸಿದರು.
ಜಮೀನು ದಾನಕ್ಕೆ ಮೆಚ್ಚುಗೆ: ತೇರಗಾಂವ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಎರಡು ಗುಂಟೆ ಜಮೀನು ದಾನ ಮಾಡಿದ ದಾನಿಗಳ ಬಗ್ಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ದಾಂಡೇಲಿ ಡಿವೈಎಸ್ಪಿ ಬಿ. ಗಿರೀಶ್, ಎಸಿಎಫ್ ರಂಗನಾಥ, ಜಿಪಂ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ತಾಪಂ ಮಾಜಿ ಉಪಾಧ್ಯಕ್ಷ ಸುರೇಶ ಮಾನಗೆ, ವಿಠ್ಠಲ ಬೆಣಚೆಕರ್ ಹಾಗೂ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.