ನಮ್ಮ ಪೂರ್ವಜರ ಜೀವನಶೈಲಿ, ಆಡಳಿತ ವ್ಯವಸ್ಥೆ, ಧಾರ್ಮಿಕ ಆಚರಣೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಇತಿಹಾಸ ದಾಖಲಿಸಿರುವ ಅಮೂಲ್ಯ ಆಕರಗಳಾಗಿವೆ.
ಹೂವಿನಹಡಗಲಿ: ಗ್ರಾಮೀಣ ಹಾಗೂ ಪಟ್ಟಣ ನಗರ ಪ್ರದೇಶದಲ್ಲಿರುವ ಐತಿಹಾಸಿದ ಶಾಸನಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಇಲಾಖೆಯ ವಸ್ತು ಸಂಗ್ರಹಾಲಯದ ನಿರ್ವಾಹಕ ಆರ್. ಮಂಜಾನಾಯ್ಕ ಹೇಳಿದರು.
ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಮಹತ್ವ ಯುವಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಪಾರಂಪರಿಕ ಸಪ್ತಾಹದ ಅಂಗವಾಗಿ ತಾಲೂಕಿನ ಶಾಸನಗಳ ಪರಂಪರೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಸೋಗಿ ಪಟ್ಟೇದ ಸಿದ್ಧಮಲ್ಲಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ವಿಜಯನಗರ ಜಿಲ್ಲೆಯ ಸರ್ಕಾರಿ ವಸ್ತು ಸಂಗ್ರಹಾಲಯ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ, ತಾಲೂಕಿನ ಶಾಸನಗಳ ಐತಿಹಾಸಿಕ ಮಹತ್ವ, ಅವುಗಳಲ್ಲಿನ ಐತಿಹಾಸಿಕ ಮಾಹಿತಿ ಹಾಗೂ ಸ್ಥಳೀಯ ಇತಿಹಾಸದ ಅಧ್ಯಯನದಲ್ಲಿ ಶಾಸನಗಳ ಪಾತ್ರದ ಕುರಿತು ಮಾಹಿತಿ ನೀಡಿದರು.
ಶಾಸನಗಳು ಕೇವಲ ಕಲ್ಲಿನ ಮೇಲಿನ ಬರಹಗಳಲ್ಲ, ಅವು ನಮ್ಮ ಪೂರ್ವಜರ ಜೀವನಶೈಲಿ, ಆಡಳಿತ ವ್ಯವಸ್ಥೆ, ಧಾರ್ಮಿಕ ಆಚರಣೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಇತಿಹಾಸ ದಾಖಲಿಸಿರುವ ಅಮೂಲ್ಯ ಆಕರಗಳಾಗಿವೆ. ಇಂತಹ ಐತಿಹಾಸಿಕ ದಾಖಲೆ ಗುರುತಿಸುವುದು, ಅವುಗಳ ಮಹತ್ವ ಅರಿಯುವುದು ಮತ್ತು ಮುಂದಿನ ಪೀಳಿಗೆಗೆ ಅವುಗಳನ್ನು ಸಂರಕ್ಷಿಸಿ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಐತಿಹಾಸಿಕ ಸ್ಮಾರಕ ಮತ್ತು ಶಾಸನಗಳ ಕುರಿತು ಆಸಕ್ತಿ ಬೆಳೆಸಿಕೊಂಡು ಸ್ಥಳೀಯ ಇತಿಹಾಸದ ಅರಿವು ಹೊಂದಬೇಕೆಂದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸೋಗಿಯ ಕಲ್ಲೇಶ್ವರ ದೇವಸ್ಥಾನವನ್ನು ರಾಜ್ಯ ಸಂರಕ್ಷಿತ ಸ್ಮಾರಕವೆಂದು ಇಲಾಖೆಯಿಂದ ಘೋಷಿಸಿರುವ ಹಿನ್ನೆಲೆ ಸ್ಮಾರಕದ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಅವುಗಳ ಮಹತ್ವದ ಕುರಿತು ಜನಜಾಗೃತಿ ಮೂಡಿಸುವುದು ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವ ಉತ್ತೇಜಿಸುವುದು ಜಾಥಾದ ಉದ್ದೇಶವಾಗಿತ್ತು.
ಪ್ರಾಚಾರ್ಯೆ ಜ್ಯೋತಿ ಎಸ್.ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ವೆಂಕಟೇಶ್ ಹರ್ಲಾಪುರ, ನರೇಶ್, ನಟರಾಜ್, ಜಯಪ್ರಕಾಶ್ ನಾರಾಯಣ್ ಹಾಗೂ ನೇತ್ರಾವತಿ ಉಪಸ್ಥಿತರಿದ್ದರು.
ವಿಶ್ವ ಪಾರಂಪರಿಕ ಸಪ್ತಾಹದ ಆಶಯಕ್ಕೆ ಪೂರಕವಾಗಿ ನಡೆದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸ್ಥಳೀಯ ಇತಿಹಾಸ, ಶಾಸನ ಅಧ್ಯಯನ ಮತ್ತು ಸ್ಮಾರಕಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಮಹತ್ವದ ಪ್ರಯತ್ನವಾಗಿ ಗಮನ ಸೆಳೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.