ತುಂಗಭದ್ರಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಾರಾಯಣದೇವರಕೆರೆ ಊರಿನ ನಮ್ಮ ಪೂರ್ವಜರು ತಮ್ಮ ಮನೆ, ಫಲವತ್ತಾದ ಜಮೀನನ್ನು ಬಿಟ್ಟುಕೊಟ್ಟು ತ್ಯಾಗ ಮಾಡಿದ್ದರಿಂದಲೇ ತುಂಗಭದ್ರಾ ಜಲಾಶಯ ನಿರ್ಮಾಣವಾಗಿರುವುದು

ಮರಿಯಮ್ಮನಹಳ್ಳಿ: ತುಂಗಭದ್ರಾ ಜಲಾಶಯ ನಿರ್ಮಾಣಕ್ಕೆ ನಾರಾಯಣ ದೇವರಕೆರೆ ಊರಿನ ಜನರು ತಮ್ಮ ಮನೆ ಮತ್ತು ಫಲವತ್ತಾದ ಭೂಮಿ ತ್ಯಾಗ ಮಾಡಿ ಇತರರ ಬದುಕಿಗೆ ಬೆಳಕಾದ ನಾಣಿಕೆರೆ ಗ್ರಾಮದ ಇತಿಹಾಸ ಜೀವಂತವಾಗಿರಿಸಲು ನಾಣಿಕೆರೆ ಉತ್ಸವ ಸರ್ಕಾರವೇ ಅಧಿಕೃತವಾಗಿ ಆಚರಿಸಬೇಕು ಮತ್ತು ಉತ್ಸವಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ.ನೇಮಿರಾಜ್‌ ನಾಯ್ಕ್‌ ಸರ್ಕಾರಕ್ಕೆ ಒತ್ತಾಯಿಸಿದರು.

ಇಲ್ಲಿನ ಶಾಲಾ ಆವರಣದಲ್ಲಿ ನಾಣಿಕೆರೆ ಯುವ ಸೇವಾ ಟ್ರಸ್ಟ್‌ ನ ಮೂರನೇ ವರ್ಷದ ನಾಣಿಕೆರೆ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಗುಡೇಕೋಟೆ ಉತ್ಸವದ ಮಾದರಿಯಲ್ಲೇ ನಾಣಿಕೆರೆ ಉತ್ಸವಕ್ಕೂ ಸರ್ಕಾರ ಅನುದಾನ ನೀಡಿ ಮುಂದಿನ ವರ್ಷದಿಂದ ನಾಣಿಕೆರೆ ಉತ್ಸವವನ್ನು ಸರ್ಕಾರಿ ಉತ್ಸವವನ್ನಾಗಿ ಆಚರಿಸಬೇಕು. ಒಂದು ವೇಳೆ ಈ ಸರ್ಕಾರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಶೇ.101ರಷ್ಟು ನಾಣಿಕೆರೆ ಉತ್ಸವವನ್ನು ಸರ್ಕಾರದಿಂದ ಅದ್ಧೂರಿಯಾಗಿ ಆಚರಿಸುತ್ತೇವೆ ಎಂದು ಭರವಸೆ ನೀಡಿದರು. 1953ರ ಹಿಂದೆ ಮಲ್ಲಾಪುರ ತಾಲೂಕಿಗೆ ಸೇರಿದ್ದ ನಾಣಿಕೆರೆ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಆಳಿದ ಪುಣ್ಯಭೂಮಿಯಾಗಿತ್ತು. ತುಂಗಭದ್ರಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಾರಾಯಣದೇವರಕೆರೆ ಊರಿನ ನಮ್ಮ ಪೂರ್ವಜರು ತಮ್ಮ ಮನೆ, ಫಲವತ್ತಾದ ಜಮೀನನ್ನು ಬಿಟ್ಟುಕೊಟ್ಟು ತ್ಯಾಗ ಮಾಡಿದ್ದರಿಂದಲೇ ತುಂಗಭದ್ರಾ ಜಲಾಶಯ ನಿರ್ಮಾಣವಾಗಿರುವುದು. ಈ ತುಂಗಭದ್ರಾ ಜಲಾಶಯದಿಂದ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಮರಿಯಮ್ಮನಹಳ್ಳಿ ಸೇರಿದಂತೆ ದೂರದ ಪಾವಗಡದವರೆಗೂ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ದೊರೆಯುತ್ತಿದೆ. ಇಂತಹ ತ್ಯಾಗದ ತವರೂರಾದ ನಾಣಿಕೆರೆ ಊರಿನ ಹೆಸರನ್ನು ನಶಿಸಲು ಬಿಡದೆ ಸ್ಥಳೀಯ ಯುವಕರು ನಾಣಿಕೆರೆ ಉತ್ಸವದ ಮೂಲಕ ಜೀವಂತವಾಗಿರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ, ಜಿ.ನಾಗಲಾಪುರದ ನಿರಂಜನ ಪ್ರಭು ಸ್ವಾಮಿ ಸಾನ್ನಿಧ್ಯ ವಹಿಸಿ ಸಭೆಯಲ್ಲಿ ಆಶೀರ್ವಚನ ನೀಡಿದರು.

ನಾಣಿಕೆರೆ ಯುವ ಸೇವಾ ಟ್ರಸ್ಟ್ ನ ಅಧ್ಯಕ್ಷ ಎ.ರಹೆಮಾನ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಸಭೆಯಲ್ಲಿ ಮಾತನಾಡಿದರು.

ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎನ್‌.ಎಫ್‌.ಇಮಾಮ್‌ ನಿಯಾಜಿ ಸಭೆಯಲ್ಲಿ ಮಾತನಾಡಿದರು.

ಸ್ಥಳೀಯ ಮುಖಂಡ ಗೋವಿಂದರ ಪರಶುರಾಮ, ಚಿದ್ರಿ ಸತೀಶ್‌, ಎಲ್‌.ಪರಮೇಶ್ವರಪ್ಪ, ಗರಗ ಪ್ರಕಾಶ್‌ ಪೂಜಾರ್‌, ಬಾದಾಮಿ ಮೃತ್ಯುಂಜಯ, ತಳವಾರ್‌ ದೊಡ್ಡ ರಾಮಣ್ಣ, ಬುರುಡಿ ರಾಮಣ್ಣ, ಗುಂಡಾ ಸೋಮಣ್ಣ, ಸಜ್ಜದ್ ವಿಶ್ವನಾಥ, ಎಲಿಗಾರ್ ಮಂಜುನಾಥ, ಎಂ. ವೆಂಕಟೇಶ್‌, ಕೆ. ರಘುವೀರ್‌, ಉಪ್ಪಾರ್‌ ಶ್ರೀರಾಮ, ಎಂ.ಎಸ್‌. ಗೌಸ್‌, ಎಲ್‌. ನಾಗರಾಜ, ಓಬಪ್ಪ, ಮಿಲಿಟಿರಿ ಮಂಜುನಾಥ, ಅಯ್ಯನಳ್ಳಿ ಮಾಬುಸಾಹೇಬ್‌, ಮಂಜುನಾಥ ಸೇರಿದಂತೆ ಹಿರಿಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ನಾಣಿಕೆರೆ ವಸಂತ ವೈಭವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.