ಕನ್ನಡಪ್ರಭ ವಾರ್ತೆ ಶಹಾಪುರ
ಗಂಡು- ಹೆಣ್ಣಿನ ನಡುವೆ ಸಮಾನತೆ ಇರಲಿ, ಭೇದ-ಭಾವ ಬೇಡ. ಹೆಣ್ಣೊಂದು ಕಲೆತರೆ ಶಾಲೆ ಎಂದು ತೆರೆದಂತೆ ಎನ್ನುವಂತೆ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಾಗ ಮಾತ್ರ ಈ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಂಗನವಾಡಿಯ ಮೇಲ್ವಿಚಾರಕಿ ವಿದ್ಯಾ ಕೂಡಲಗಿ ಹೇಳಿದರು.ತಾಲೂಕಿನ ಗೋಗಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾಪಂ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ನಡೆದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಅಭಿಯಾನ ಪ್ರಯುಕ್ತ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ, ಹೆಣ್ಣು ಮಕ್ಕಳ ಅಭಿವೃದ್ಧಿಗೆ, ಶಿಕ್ಷಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ತಾಯಿಯಾಗಿ, ಹೆಂಡತಿಯಾಗಿ ಹೆಣ್ಣು ಬೇಕು. ಆದರೆ, ಮಗಳಾಗಿ ಏಕೆ ಬೇಡ. ಹೆಣ್ಣು- ಗಂಡು ಎಂಬ ಭೇದ ಬೇಡ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಬೇಕು. ಹೆಣ್ಣು ಶಿಶು ಹತ್ಯೆ ತಡೆಯುವುದು, ಹೆಣ್ಣು ಶಿಶುಗಳ ಹತ್ಯೆಯಿಂದ ಸಮಾಜದ ಮೇಲೆ ಆಗುವ ಅಸಮತೋಲನಗಳ ಬಗ್ಗೆ ಈ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.ಅಂಗನವಾಡಿ ಕಾರ್ಯಕರ್ತೆ ರೇಣುಕಾ ಹೊಸಮನಿ ಅವರು, ಸಮಾಜದಲ್ಲಿ ಮಹಿಳೆಯರ ಮೇಲೆ ನಾನಾ ರೀತಿಯ ದೌರ್ಜನ್ಯ ಆಗುತ್ತಿದ್ದು, ಹೆಣ್ಣನ್ನು ಗೌರವಿಸುವ ಮನೋಭಾವವನ್ನು ಪ್ರತಿಯೊಬ್ಬ ಪುರುಷ ರೂಪಿಸಿಕೊಳ್ಳಬೇಕು ಎಂದರು.
ಈ ಯೋಜನೆಯು ಸಿಎಸ್‌ಆರ್ ಸಮಸ್ಯೆಯನ್ನು ಸಾಮೂಹಿಕ ಪ್ಯಾನ್-ಇಂಡಿಯನ್ ಅಭಿಯಾನಗಳ ಮೂಲಕ ಪರಿಹರಿಸಲು ಪ್ರಯತ್ನಿಸುತ್ತದೆ ಮತ್ತು ಇದು ಲಿಂಗ-ನಿರ್ಣಾಯಕ ಎಂದು ಲೇಬಲ್ ಮಾಡಲಾದ 100 ಜಿಲ್ಲೆಗಳಲ್ಲಿ ಬಹುವಲಯ ಸರ್ಕಾರದ ಮಧ್ಯಸ್ಥಿಕೆಗಳನ್ನು ಹೊಂದಿರುತ್ತದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.ಅಂಗನವಾಡಿ ಕಾರ್ಯಕರ್ತೆಯರಾದ ಕವಿತಾ, ಶಶಿಕಾಂತಮ್ಮ, ಸಹಾಯಕಿಯರಾದ ಮಲ್ಲಮ್ಮ, ನಿಂಗಮ್ಮ, ಹೊನ್ನಮ್ಮ ಸೇರಿದಂತೆ ಪಂಚಾಯತ್ ಸದಸ್ಯರು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.