ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ನಗರದಲ್ಲಿ ಶನಿವಾರ ಪುಷ್ಪಾಲಂಕೃತ ಸಾರೋಟಿನಲ್ಲಿ ತಾಯಿ ಭುವನೇಶ್ವರಿ ಹಾಗೂ ಸರ್ವಾಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರ ಅದ್ಧೂರಿ ಮೆರವಣಿಗೆ ನಡೆಯಿತು.ಮೆರವಣಿಗೆಯುದ್ದಕ್ಕೂ ಕನ್ನಡ ಧ್ವಜಗಳು ರಾರಾಜಿಸಿದರೆ, ಧ್ವನಿ ವರ್ಧಕದಲ್ಲಿ ಕನ್ನಡ ಗೀತೆಗಳು ಮೊಳಗಿದವು. ಕನ್ನಡ ತಾಯಿ ಭುವನೇಶ್ವರಿಗೆ ಜಯವಾಗಲಿ, ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟಿದವು.
ಡೊಳ್ಳು ಕುಣಿತ, ಬ್ಯಾಂಡ್, ಹಲಿಗೆ, ಕೋಲಾಟ, ಲಂಬಾಣಿ ನೃತ್ಯ ಮೊದಲಾದ ಕಲಾ ತಂಡಗಳು ಮೆರವಣಿಗೆಗೆ ಕಳೆ ನೀಡಿದವು. ಶರಣರು, ಮಹಾ ಪುರುಷರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಿಗಳು ಸಾರ್ವಜನಿಕರ ಗಮನ ಸೆಳೆದರು.ಸಾರೋಟಿನಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸರ್ವಾಧ್ಯಕ್ಷರು ಇದ್ದರೆ, ಟ್ರ್ಯಾಕ್ಟರ್‌ಗಳಲ್ಲಿ ಬಸವಣ್ಣ, ಅಕ್ಕ ಮಹಾದೇವಿ, ಮಹಾತ್ಮ ಗಾಂಧೀಜಿ, ತುಮಕೂರಿನ ಡಾ. ಶಿವಕುಮಾರ ಸ್ವಾಮೀಜಿ, ಡಾ. ಚನ್ನಬಸವ ಪಟ್ಟದ್ದೇವರು, ರಾಣಿ ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮೊದಲಾದವರ ಪಾತ್ರಧಾರಿ ಮಕ್ಕಳು ಆಸೀನರಾಗಿದ್ದರು. ತೋಟಗಾರಿಕೆ ಇಲಾಖೆ ವಾಹನ ಸ್ತಬ್ಧ ಚಿತ್ರ ಹೊತ್ತು ಸಾಗಿತ್ತು. ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಗೀತೆಗಳ ತಾಳಕ್ಕೆ ತಕ್ಕಂತೆ ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಿದರು. ಗಣ್ಯರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.ಮನ್ನಳ್ಳಿ ರಸ್ತೆಯಲ್ಲಿರುವ ಕರ್ನಾಟಕ ಪದವಿಪೂರ್ವ ಕಾಲೇಜಿನಿಂದ ಆರಂಭಗೊಂಡ ಮೆರವಣಿಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಮಹಾತ್ಮ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗತಸಿಂಗ್ ವೃತ್ತ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಪ್ರಭುರಾವ್ ಕಂಬಳಿವಾಲೆ ರಸ್ತೆ, ರೋಟರಿ ಕನ್ನಡಾಂಬೆ ವೃತ್ತದ ಮಾರ್ಗವಾಗಿ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್‌ಖಾನ್ ಜಂಟಿಯಾಗಿ ಡೊಳ್ಳು ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು.ಹಾರಕೂಡದ ಚನ್ನವೀರ ಶಿವಾಚಾರ್ಯರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಡಾ. ಗಂಗಾಂಬಿಕೆ ಅಕ್ಕ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಮನು ಬಳಿಗಾರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಸಮ್ಮೇಳನ ಸ್ವಾಗತ ಸಮಿತಿಯ ಕೋಶಾಧ್ಯಕ್ಷ ಬಾಬುವಾಲಿ, ಸಾಹಿತಿಗಳಾದ ಡಾ. ಬಸವರಾಜ ಬಲ್ಲೂರ, ಭಾರತಿ ವಸ್ತ್ರದ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಟಿ.ಎಂ. ಮಚ್ಚೆ, ಶಿವಕುಮಾರ ಕಟ್ಟೆ, ಖಜಾಂಚಿ ಶಿವಶಂಕರ ಟೋಕರೆ, ಬೀದರ್ ತಾಲೂಕು ಘಟಕದ ಅಧ್ಯಕ್ಷ ಎಂಎಸ್ ಮನೋಹರ, ಮೆರವಣಿಗೆ ಸಮಿತಿ ಅಧ್ಯಕ್ಷ ಜಯರಾಜ ಖಂಡ್ರೆ, ಪ್ರಮುಖರಾದ ಚಂದ್ರಶೇಖರ ಹೆಬ್ಬಾಳೆ, ಸಚಿನ್ ಕೊಳ್ಳೂರ, ವಿಜಯಕುಮಾರ ಪಾಟೀಲ್ ಯರನಳ್ಳಿ, ಗುರುನಾಥ ರಾಜಗೀರಾ, ಪರಮೇಶ್ವರ ಬಿರಾದಾರ, ಸಂತೋಷಕುಮಾರ ಮಂಗಳೂರೆ, ಅಶೋಕ ದಿಡಗೆ, ವೀರಶೆಟ್ಟಿ ಚನಶೆಟ್ಟಿ, ಆನಂದ ಪಾಟೀಲ, ಸಿದ್ಧಾರೂಢ ಭಾಲ್ಕೆ ಮೊದಲಾದವರು ಪಾಲ್ಗೊಂಡಿದ್ದರು.