ವಿದ್ಯಾರ್ಥಿಗಳಲ್ಲಿ ಹಳಗನ್ನಡ ಓದುವಿಕೆ ಉತ್ತೇಜಿಸಿ: ಪ್ರೊ.ಎಂ. ವೆಂಕಟೇಶ್ವರಲು

KannadaprabhaNewsNetwork |  
Published : Feb 08, 2024, 01:32 AM IST
:ಕನ್ನಡ ವಿವಿ ಹಂಪೆ, ಜಿಲ್ಲಾ ಕ.ಸಾ.ಪ ತುಮಕೂರು, ನಗರದ ಕನ್ನಡ ಭವನವನ್ನು ಏರ್ಪಡಿಸಿದ್ದ ಡಿ.ಎಲ್. ನರಸಿಂಹಾಚಾರ್ ದತ್ತಿನಿಧಿ ಕಾರ್ಯಕ್ರಮವನ್ನು ತುಮಕೂರು ವಿವಿ ಕುಲಪತಿಗಳಾದ ಡಾ. ವೆಂಕಟೇಶ್ವರಲು ಉದ್ಘಾಟಿಸಿದರು. ಕನ್ನಡ ವಿ.ವಿ. ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಡಿ.ಎನ್. ಯೋಗೀಶ್ವರಪ್ಪ, ಡಾ. ಕೆ. ರವೀಂದ್ರನಾಥ್, ಡಾ. ಎಸ್.ಪಿ. ಪದ್ಮಪ್ರಸಾದ್, ಡಾ. ಎಫ್.ಟಿ. ಹಳ್ಳಿಕೇರಿ, ಸೀತಾರಾಮ ಅಯ್ಯಂಗಾರ್ ಉಪನಿರ್ದೇಶಕರಾದ ರಂಗಧಾಮಯ್ಯ ಹಾಜರಿದ್ದರು | Kannada Prabha

ಸಾರಾಂಶ

ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಹೆಚ್ಚಿಸಬೇಕಾದರೆ ಹಳಗನ್ನಡದ ಪಾಠಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಪಠ್ಯದಲ್ಲಿ ಅಳವಡಿಸಬೇಕಾದ ಅನಿವಾರ್ಯತೆ ಇದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು

ಕನ್ನಡಪ್ರಭ ವಾರ್ತೆ ತುಮಕೂರು

ಇಂದಿನ ವಿಜ್ಞಾನ ಮತ್ತು ತಾಂತ್ರಿಕಯುಗದಲ್ಲಿ ವಿದ್ಯಾರ್ಥಿಗಳಲ್ಲಿಯೇ ಅಲ್ಲದೆ ಸಾಮಾನ್ಯ ಜನರಲ್ಲಿಯೂ ಕೂಡಾ ಮಾತೃಭಾಷಾ ಕಲಿಕೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಕುಂಠಿತವಾಗುತ್ತಿದೆ. ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಹೆಚ್ಚಿಸಬೇಕಾದರೆ ಹಳಗನ್ನಡದ ಪಾಠಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಪಠ್ಯದಲ್ಲಿ ಅಳವಡಿಸಬೇಕಾದ ಅನಿವಾರ್ಯತೆ ಇದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಕನ್ನಡ ವಿವಿ ಹಂಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಭಾಷಾ ಪ್ರೌಢಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಹಳಗನ್ನಡ ಓದು ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ನಾಡಿನ ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯೆಯನ್ನು ಕಲಿಸಿದರೆ ಕನ್ನಡ ವಿಶ್ವವಿದ್ಯಾನಿಲಯ ವಿದ್ಯೆಯನ್ನು ಸೃಷ್ಟಿಸುವ ವಿದ್ಯಾನಿಲಯವಾಗಿದೆ. ಇದುವರೆಗೆ ಈ ವಿವಿಯಿಂದ 1500 ವಿವಿಧ ಕ್ಷೇತ್ರದ ಕನ್ನಡ ಕೃತಿಗಳನ್ನು ಪ್ರಕಟಿಸಿರುವುದೇ ಅಲ್ಲದೆ ನಾಡಿನ ವಿವಿಧ ಸ್ಥಳದ ಜನರಿಂದ ೫೦೦೦ ಪ್ರಾಚೀನ ಕಾವ್ಯಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿಟ್ಟುಕೊಂಡು ದೇಶದಲ್ಲಿಯೇ ವಿನೂತನ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಹಳಗನ್ನಡ ಸಾಹಿತ್ಯದ ಓದನ್ನು ಹಾಳು ಮಾಡಿದ್ದೇ ಅದಕ್ಕೆ ಬಂದಿರುವ ಗದ್ಯಾನುವಾದಗಳು. ಮೂಲ ಕೃತಿಗಳನ್ನು ಅಧ್ಯಯನ ಮಾಡದೆ, ಅಧ್ಯಾಪಕರು ಮಾರುಕಟ್ಟೆಯ ಗೈಡ್‌ಗಳ ಮೇಲೆ ಅವಲಂಬಿತರಾಗಿ ಹಳಗನ್ನಡ ಓದನ್ನು ವಿದ್ಯಾರ್ಥಿ ಸಮೂಹದಲ್ಲಿ ಕ್ಲಿಷ್ಟಗೊಳಿಸಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿಶೇಷ ಉಪನ್ಯಾಸ ನೀಡಿದ ಡಾ.ಎಸ್.ಪಿ. ಪದ್ಮಪ್ರಸಾದ್ ಮಾತನಾಡಿ, ಹಳಗನ್ನಡದ ಓದು ಮತ್ತು ಮರು ಓದುಗಳಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರತ್ಯೇಕವಾದ ಪ್ರಭಾವಲಯವನ್ನು ಸೃಷ್ಟಿಸಲು ಸಾಧ್ಯ. ಈ ಕಾರ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಂದ ಮಾತ್ರ ಸಾಧ್ಯ ಆದುದರಿಂದ ಈ ಹಂತಗಳ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳು ಅತ್ಯಾವಶ್ಯಕವಾಗಿವೆ ಎಂದರು.

ಡಿ.ಎಲ್. ನರಸಿಂಹಾಚಾರ್‌ ದತ್ತಿನಿಧಿಯಿಂದ ಏರ್ಪಾಟಾದ ಮೂರು ದಿನಗಳ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಡಿ.ಎಲ್. ನರಸಿಂಹಾಚಾರ್ ಅಳಿಯ ಸೀತಾರಾಮ ಅಯ್ಯಂಗಾರ್‌ ಮೊಮ್ಮಗ ಜಯಸಿಂಹ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗಧಾಮಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಕಾರ್ಯದರ್ಶಿ ಡಾ. ಡಿ.ಎನ್. ಯೋಗೀಶ್ವರಪ್ಪ, ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ. ಕೆ. ರವೀಂದ್ರನಾಥ್ ಹಾಜರಿದ್ದರು.

ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕ ಮತ್ತು ಶಿಬಿರದ ನಿರ್ದೇಶಕ ಪ್ರೊ.ಎಫ್.ಟಿ. ಹಳ್ಳಿಕೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಡಿ.ಎನ್. ಯೋಗೀಶ್ವರಪ್ಪ ಸ್ವಾಗತಿಸಿದರು. ಗೋಣಿಬಸಪ್ಪ ವಂದಿಸಿದರು. ಪ್ರೌಢಶಾಲೆ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಕೃಷ್ಣಪ್ಪ ನಿರೂಪಿಸಿದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್